Tuesday 31 May 2016

" ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರ "

ಮೂಡಬಿದಿರೆಯಲ್ಲಿ ಕಳೆದ ಐದು ದಿನಗಳಿಂದ ಜರಗುತ್ತಿದ್ದ , ಆಳ್ವಾಸ್ ಪ್ರತಿಷ್ಟಾನ ( ರಿ) ವತಿಯಿಂದ ಆಳ್ವಾಸ್ ಕಾಲೇಜಿನ " ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರ " ದ ವಿದ್ಯಾರ್ಥಿಗಳಿಂದ ಪ್ರಸ್ತುತ ಪಡಿಸಲ್ಪಟ್ಟ
" ಆಳ್ವಾಸ್ ಯಕ್ಷಗಾನ ಸಿರಿ " ನಿನ್ನೆ ಸಮಾಪನಗೊಂಡಿತು . ಇದರ ಬಗ್ಗೆ ಎರಡು ಮಾತು
" ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರ " ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ರೂಪಿಸಲ್ಪಟ್ಟ ಸಂಸ್ತೆ. ಅಂದು ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗದ HOD ಆಗಿದ್ದ ಡಾ| ಬಿ.ನಿತ್ಯಾನಂದ ಶೆಟ್ಟರ ಕನಸಿನ ಕೂಸಾದ ಈ ಸಂಸ್ತೆ , ಡಾ| ಶೆಟ್ಟರ ಅಪೇಕ್ಷೆಯಂತೆ ಯಕ್ಷಗಾನ ಪೋಷಕರು ಹಾಗೂ ಆಳ್ವಾಸ್ ಕಾಲೇಜಿನ ಅಧ್ಯಕ್ಷರಾದ
ಡಾ| ಮೋಹನ್ ಆಳ್ವರು ಎಲ್ಲಾ ವ್ಯವಸ್ತೆ ಮಾಡಿದ ಸಂಸ್ತೆಯೇ " ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರ ."
ಕಾಲೇಜಿನ ವಿದ್ಯಾರ್ಥಿಗಳಲ್ಲಿರುವ ಯಕ್ಷಗಾನದ ಅಭಿರುಚಿ ಗುರುತಿಸಿ, ಅವರಿಗೆ ಉಚಿತ ವಿದ್ಯಾಭ್ಯಾಸದೊಂದಿಗ ಉಚಿತ ವಸತಿ ಸೌಕರ್ಯವನ್ನೂ ಒದಗಿಸಿ , ಯಕ್ಷಗಾನದ ಸೇವೆಯನ್ನು ಸದ್ದಿಲ್ಲದೇ ಗೈಯುತ್ತಿರುವ ಡಾ| ಮೋಹನ ಆಳ್ವರ ದೂರಧೃಷ್ಟಿ , ಈ ಸಂಸ್ತೆಯ ಜೀವಾಳ. ರಾಜ್ಯದಾದ್ಯಂತ ನೂರಾರು ಯಕ್ಷಗಾನ ಪ್ರದರ್ಶನ ನೀಡಿದ ಈ ಸಂಸ್ತೆಯ ವಿದ್ಯಾರ್ಥಿಗಳ ಕಲಾಕೌಶಲ್ಯ ಅಭಿನಂದನೀಯ.
ಕಳೆದ ಹತ್ತು ವರ್ಷಗಳಿಂದ , ಒಂದು ವರ್ಷ ಹೊರತು ಪಡಿಸಿದರೆ , ಪ್ರತೀಸಲ ಅಂತರ್ಕಾಲೇಜು ಯಕ್ಷಗಾನ ಸ್ಪರ್ಧೆಯಲ್ಲಿ ಪ್ರಥಮ ಪ್ರಶಸ್ತಿ ಹಾಗೂ ವೈಯುಕ್ತಿಕ ಪ್ರಶಸ್ತಿಗಳನ್ನು ಪಡೆದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾದ ಆಳ್ವಾಸ್ , ಅರ್ಹವಾಗಿಯೇ ಪ್ರಶಸ್ತಿ ಗೆದ್ದಿತೆಂಬುದು ಗಮನಾರ್ಹ. ಸುಪ್ರಸಿಧ್ದ ಯಕ್ಷಗಾನ ಕಲಾವಿದರಾದ ಶೇಖರ್ ಶೆಟ್ಟಿಗಾರ್ , ಅವರ ಸೋದರ ಪ್ರೊ | ಸದಾಶಿವ ಶೆಟ್ಟಿಗಾರ್, ಪ್ರಸಾದ್ ಚೇರ್ಕಾಡಿ , ಪವನ್ ಕುಮಾರ್ ಕೆರ್ವಾಶೆ ಹಾಗೂ ಪ್ರಸ್ತುತ ಕಾಲೆಜಿನ ವಿದ್ಯಾರ್ಥಿಯಾದ ದೀವಿತ್ ಕೋಟ್ಯಾನರು ಗುರುಗಳಾಗಿ ಈ ಸಂಸ್ತೆಯ ಉನ್ನತಿಗೆ ಕಾರಣರಾಗಿದ್ದಾರೆ . ದಿ.ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿ , ವಿಶ್ವನಾಥ ಶೆಟ್ಟಿ , ತಾರಾನಾಥ ವರ್ಕಾಡಿ , ಗಣೇಶ ಕೊಲೆಕಾಡಿ , ಈಶ್ವರ್ ಪ್ರಸಾದ್, ಬಲಿಪ ಶಿವಶಂಕರರಂಥಹ ಕಲಾವಿದರ ಮಾರ್ಗದರ್ಶನ ವಿದ್ಯಾರ್ಥಿಗಳಿಗೆ ದೊರೆತಿದೆ . ಇಂದು ಈ ಸಂಸ್ತೆಯ ವಿದ್ಯಾರ್ಥಿ ಕಲಾವಿದರ ಪ್ರಸ್ತುತಿಯು ವೃತ್ತಿಪರ ಕಲಾವಿದರ ಮಟ್ಟದಲ್ಲಿದೆ ಎಂದರೆ, ಖಂಡಿತವಾಗಿಯೂ ಉತ್ಪ್ರೇಕ್ಷೆಯ ಮಾತಲ್ಲ .ನಾನು ಕಳೆದ ನಾಲ್ಕು ವರ್ಷಗಳಿಂದಲೂ , ಈ ಸಂಸ್ತೆಯ ವಿದ್ಯಾರ್ಥಿಗಳ ಪ್ರದರ್ಶನ ಕಂಡು ಉದಯವಾಣಿ , ವಿಜಯಕರ್ನಾಟಕ , ಬಲ್ಲಿರೇನಯ್ಯಾ ಪತ್ರಿಕೆಗಳಲ್ಲಿ ವಿಮರ್ಶೆ ಬರೆದಾಗಲೂ ಈ ವಿಷಯವನ್ನು ಉಲ್ಲೇಖಿಸಿದ್ದೆ . ವೃತ್ತಿಪರರ ಮಟ್ಟದಲ್ಲಿ ಪ್ರದರ್ಶನ ನೀಡುತ್ತಿದ್ದ ಈ ವಿದ್ಯಾರ್ಥಿಗಳನ್ನು ಕಂಡಾಗ " ಯಕ್ಷಗಾನಕ್ಕೆ ಅಳಿವಿಲ್ಲ " ಎಂದೇ ಬರೆದಿದ್ದೆ . ಸ್ವತಃ ಕಲಾವಿದರಾದ ಡಾ| ಆಳ್ವರು ಯಕ್ಷಗಾನಕ್ಕೆ ನೀಡುತ್ತಿರುವ ಪ್ರೋತ್ಸಾಹವನ್ನು ಮೆಚ್ಚಲೇಬೇಕು. ಈ ಸಂಸ್ತೆಯಲ್ಲಿ ಕಲಿತ, ಯಕ್ಷಗಾನದಲ್ಲಿ ಸಕ್ರಿಯರಾದ ವಿದ್ಯಾರ್ಥಿಗಳು, ಇಂದು ಯಕ್ಷರಂಗದಲ್ಲಿ ಮಿಂಚುತ್ತಿದ್ದಾರೆ. ರಾಹುಲ್ ಶೆಟ್ಟಿ , ಕಟೀಲು ಮೇಳದ ಕಲಾವಿದರಾದೆರೆ , ಪ್ರಸಾದ್ ಚೇರ್ಕಾಡಿಯವರು, ಚಲನಚಿತ್ರ, ಧಾರಾವಾಹಿ , ನಾಟಕ ಹಾಗೂ ಯಕ್ಷಗಾನೀಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಪ್ರಸಿಧ್ಧರಾಗಿದ್ದಾರೆ. ಸುಧಾಕರ್ ಜೈನ್ ರವರು ಪತ್ರಕರ್ತರಾಗಿದ್ದುಕೊಂಡು ರಾಜ್ಯದ ರಾಜಧಾನಿಯಾದ ಬೆಂಗಳೂರಲ್ಲಿ ಯಕ್ಷಗಾನ , ತಾಳಮದ್ದಳೆಯ ಕಂಪನ್ನು " ಧೀಂಗಿಣ " ದ ಮೂಲಕ ಹರಡಿಸುತ್ತಿದ್ದಾರೆ. ಪವನ್ ಕುಮಾರ್, ಪ್ರಜ್ವಲ್ ಪೆಜತ್ತಾಯ, ಶರತ್ ಕುಮಾರ್ ಮುಂತಾದವರು ಈಗಲೂ ವೃತ್ತಿಯೊಂದಿಗೆ, ಪ್ರವೃತ್ತಿಯಲ್ಲಿ ಯಕ್ಷಗಾನೀಯ ಚಟುವಟಿಕೆಯಲ್ಲಿದ್ದಾರೆ.
ನಿನ್ನೆಯ " ಶ್ರೀದೇವಿ ಕದಂಬ ಕೌಶಿಕೆ "
ಪ್ರದರ್ಶನವನ್ನು ಶ್ರೇಷ್ಟ ಮಟ್ಟದಲ್ಲಿ ಈ ಸಂಸ್ತೆಯ ವಿದ್ಯಾರ್ಥಿಗಳು , ಸಾವಿರಾರು ಪ್ರೇಕ್ಷಕರ ಸಮ್ಮುಖದಲ್ಲಿ ಪ್ರದರ್ಶಿಸಿ ಮೆಚ್ಚುಗೆ ಗಳಿಸಿದರು. " ಶ್ರೀದೇವಿ ಮಹಾತ್ಮೆ " ಪ್ರಸಂಗದ ಭಾಗವಾದ ಈ ಪ್ರಸಂಗದ ಪ್ರದರ್ಶನ ಸುಲಭದ ಕೆಲಸವಲ್ಲ . ವಿಭಿನ್ನ ಸ್ವಭಾವದ, ನವರಸಗಳನ್ನೊಳಗೊಂಡ ಈ ಕಥಾಭಾಗ ಪ್ರದರ್ಶಿಸುವದೆಂದರೆ , ವೃತ್ತಿಪರ ಕಲಾವಿದರಿಗೂ ಒಂದು ಸವಾಲೇ ಎಂದರೆ ತಪ್ಪಾಗಲಿಕ್ಕಿಲ್ಲ . ಶುಂಭನಿಶುಂಭರ ವೀರರಸ , ಚಂಡಮುಂಡರ ಶ್ರಂಗಾರ , ರಕ್ತಬೀಜನ ಶಾಂತ ಹಾಗೂ ಭಯಾನಕ , ಸುಗ್ರೀವನಲ್ಲಿರುವ ಕರುಣರಸ, ಕಾಳಿಯ ಬೀಭತ್ಸ , ಪಾತ್ರಿಯ ಹಾಸ್ಯ ಹಾಗೂ ಶ್ರೀದೇವಿಯ ಅದ್ಭುತ , ರುದ್ರ ರಸಗಳ ಪೂರಣ ಈ ಪ್ರಸಂಗದಲ್ಲಿದೆ . ಆದರೂ , ಈ ವಿದ್ಯಾರ್ಥಿಗಳು, ತಮ್ಮ ಈ ಪ್ರಸಂಗದ ಪ್ರಥಮ ಪ್ರದರ್ಶನದಲ್ಲೇ ಯಶಸ್ವಿಯಾದರು. ಬಣ್ಣದ ವೇಷದಲ್ಲಿ ಶುಂಭನಾಗಿ ಸಚಿನ್ ಅಮೀನರ ನಿರ್ವಹಣೆ ಅತ್ಯುತ್ತಮವಾಗಿತ್ತು.ಸಾತ್ವಿಕರ ನಿಶುಂಭನ ಪಾತ್ರ ಸಹಾ ಪೂರಕವಾಗಿತ್ತು .ಚಂಡಮುಂಡರಾಗಿ ಶಿವರಾಜ್ ಹಾಗು ಅಕ್ಷಯ್ ಮೂಡಬಿದಿರೆ ವೃತ್ತಿಪರರಂತೇ ರಂಗಸ್ತಳ ಹುಡಿ ಮಾಡಿದರು. ದೇವೇಂದ್ರನ ಪಾತ್ರದಲ್ಲಿ ಸಂತೋಷ್ ಗೋಖಲೆ ಉತ್ತಮ ಮಾತುಗಾರಿಕೆ, ಭಾವಭಿನಯದಿಂದ ಗಮನ ಸೆಳೆದರು . ಧೂಮ್ರಾಕ್ಷನ ಪಾತ್ರದಲ್ಲಿ ಜಯಕೀರ್ತಿ ಜೈನ್ ಚಿಕ್ಕ ಪಾತ್ರವಾದರೂ ಚೊಕ್ಕವಾಗಿ ನಿರ್ವಹಿಸಿದರು. ರಕ್ತಬೀಜನಾಗಿ ಅಭಿಜಿತ್ ರಾವ್ ನ ನಿರ್ವಹಣೆ ಶ್ರೇಷ್ಟ ಮಟ್ಟದಲ್ಲಿತ್ತು . ಮಾತುಗಾರಿಕೆ , ನಾಟ್ಯ, ಬಣ್ಣಗಾರಿಕೆ ಎಲ್ಲದರಲ್ಲೂ ಹವ್ಯಾಸಿಯೆಂದು ಎಣಿಸಲಾಗದಷ್ಟು ವೃತ್ತಿಪರರಂತೇ , ಪ್ರಸ್ತುತಪಡಿಸಿದರು. ಸುಗ್ರೀವ ಹಾಗೂ ಪಾತ್ರಿಯಾಗಿ ಆದಿತ್ಯ ಭಟ್ ಮಿಂಚಿದರು. ಶ್ರೀದೇವಿಯಾಗಿ ದಿವಿತ್ ಕೋಟ್ಯಾನರ ನಿರ್ವಹಣೆ ಮೆಚ್ಚಲೇಬೇಕು. ಶ್ರೀದೇವಿಯ ಗಾಂಭೀರ್ಯ, ದೇವತೆಗಳ ಮೇಲಿನ ಕರುಣೆ , ರಾಕ್ಷಸರ ಮೇಲಿರುವ ಕೋಪ ಎಲ್ಲವನ್ನೂ ಚೆನ್ನಾಗಿ ನಿರ್ವಹಿಸಿದರು.ದಿವಿತ್ ಒಬ್ಬ ಶ್ರೇಷ್ಟ ಕಲಾವಿದ ಎಂಬುದರಲ್ಲಿ ಎರಡು ಮಾತಿಲ್ಲ .
ಹಿಮ್ಮೇಳದಲ್ಲಿ ಭಾಗವತರನ್ನು ಹೊರತು ಪಡಿಸಿದರೆ ಉಳಿದವರೆಲ್ಲರೂ ಕಾಲೇಜಿನ ವಿದ್ಯಾರ್ಥಿಗಳೇ ಎಂಬುದು ವಿಶೇಷ. ಭಾಗವತರಾಗಿ ಕಾಲೇಜಿನ ಹಳೆವಿದ್ಯಾರ್ಥಿ ಪ್ರಸಾದ್ ಚೇರ್ಕಾಡಿ ಹಾಗೂ ಶಿವಶಂಕರ ಬಲಿಪರು , ಮದ್ದಳೆಯಲ್ಲಿ ನಿಖಿಲ್ ಪೈ, ಸಹಕರಿಸಿದರು . ಚೆಂಡೆವಾದನದಲ್ಲಿ ದಿವ್ಯಾಶ್ರೀ ನಾಯಕ್ ರವರ ಕೈ ಚಳಕ ಎದ್ದು ಕಾಣುತ್ತಿತ್ತು. ಮಯೂರ್ ನಾಯ್ಗ ಹಾಗೂ ಸವಿನಯರೂ ಮಿಂಚಿದರು. ಅಂತೂ ವೃತ್ತಿಪರರ ಮಟ್ಟದಲ್ಲಿ ವಿದ್ಯಾರ್ಥಿಗಳು ನೀಡಿದ ಪ್ರದರ್ಶನ ಮುದ ನೀಡಿತು. ಮಕ್ಕಳಿಗೆ ನಾಟ್ಯಾಭ್ಯಾಸ ಹಾಗೂ ನಿರ್ದೇಶನ ನೀಡಿದ , ಅದೇ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಯಾದ ದಿವೀತ್ ಕೋಟ್ಯಾನ್ ರವರ ಬಿಗು ನಿರ್ದೇಶನ ಪ್ರದರ್ಶನದುದ್ದಕ್ಕೂ ಎದ್ದು ಕಾಣುತ್ತಿತ್ತು . ದೂರದ ದುಬಾಯಿಯಲ್ಲಿದ್ದುಕೊಂಡೇ ಶೇಖರ ಶೆಟ್ಟಿಗಾರರು ಬರೆದ ಸಂಭಾಷಣೆ ಅತ್ಯುತ್ತಮವಾಗಿತ್ತು .
ವಿದ್ಯಾರ್ಥಿಗಳಲ್ಲಿ ಯಕ್ಷಗಾನದ ಆಸಕ್ತಿ ಮೂಡಿಸುವ ಡಾ| ಆಳ್ವರ ಪ್ರಯತ್ನ ನಿಜವಾಗಿಯೂ ಕಾಲೋಚಿತ ಹಾಗೂ ಕಲೋಚಿತ. ದಿವೀತ್ ಕೋಟ್ಯಾನರ ನಿರ್ದೇಶನದಲ್ಲಿ ವಿದ್ಯಾರ್ಥಿಗಳು ಇನ್ನಷ್ಟು ಉತ್ತಮ ಪ್ರದರ್ಶನ ನೀಡಲಿ ಎಂದು ಶುಭ ಹಾರೈಸುತ್ತೇನೆ .
ಎಂ. ಶಾಂತರಾಮ ಕುಡ್ವ
ಮೂಡಬಿದಿರೆ

No comments:

Post a Comment