Tuesday 31 May 2016

ಜಯಪ್ರಕಾಶ ಶೆಟ್ಟಿ ಪೆರ್ಮುದೆ.

ಹುಟ್ಟುಹಬ್ಬದ ಸಂಭೃಮದಲ್ಲಿ
ಜಯಪ್ರಕಾಶ ಶೆಟ್ಟಿ ಪೆರ್ಮುದೆ.
ಇಂದು ಜನ್ಮ ದಿನವನ್ನು ಆಚರಿಸುತ್ತಿರುವ ಜಯಪ್ರಕಾಶ ಶೆಟ್ಟಿ ಪೆರ್ಮುದೆ ಯವರು
ಇಂದಿನ ಯುವ ಕಲಾವಿದರಲ್ಲಿ ಭರವಸೆ ಮೂಡಿಸುವ ವೇಷಧಾರಿ ಹಾಗೂ ಅರ್ಥಧಾರಿಗಳು. ಆಟ ಕೂಟಗಳೆರಡರಲ್ಲೂ ಸಲ್ಲುವ ಶ್ರೇಷ್ಟ ಕಲಾವಿದರು. ಯಕ್ಷರಂಗದಲ್ಲಿ ತನ್ನದೇ ಆದ ಛಾಪನ್ನು ಸೃಷ್ಟಿಸಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಶೆಟ್ಟರು , ಇದೀಗ ತಮ್ಮ ಯಕ್ಷ ತಿರುಗಾಟದ " ರಜತ ವರ್ಷ " ದ ಹೊಸ್ತಿಲಲ್ಲಿದ್ದಾರೆ .ಕಿರಿಯ ಪ್ರಾಯದಲ್ಲೇ ಹಿರಿದನ್ನು ಸಾಧಿಸಿದ ಅಪೂರ್ವ ಕಲಾವಿದರು .
೨೬.೦೪ . ೧೯೭೫ ರಲ್ಲಿ ಕುಡಾಲಗುತ್ತು ಬಾಲಕೃಷ್ಣ ಶೆಟ್ಟಿ -- ಲೀಲಾವತೀ ದಂಪತಿಗಳ ಪುತ್ರರಾಗಿ ಜನಿಸಿದ ಶೆಟ್ಟರು , ಭಾಲ್ಯದಿಂದಲೇ ಯಕ್ಷಗಾನದತ್ತ ಧೃಷ್ಟಿ ಹೊರಳಿಸಿದವರು. ಇವರ ಅಜ್ಜನವರಾದ ಗುಂಪೆ ರಾಮಯ್ಯ ರೈಗಳು, ಮಾವ ಪೆರುವಾಯಿ ನಾರಾಯಣ ಶೆಟ್ಟಿಯವರು ಪ್ರಸಿಧ್ಧ ಕಲಾವಿದರಾದ ಕಾರಣ ಜಯಪ್ರಕಾಶರೂ , ಯಕ್ಷರಂಗಕ್ಕೆ ಸೇರುವ ಮನಸ್ಸು ಮಾಡಿದರು . ತಮ್ಮ ೧೦ ನೇ ತರಗತಿ ಪೂರೈಸಿ ಡಾ | ಕೊಳ್ಳ್ಯೂರು ರಾಮಚಂದ್ರ ರಾಯರಲ್ಲಿ ಶಿಷ್ಯತ್ವ ಸ್ವೀಕರಿಸಿ , ಪರಿಪೂರ್ಣ ಕಲಾವಿದರಾಗಿ ಕಟೀಲು ಮೇಳ ಸೇರಿದರು . ಕಟೀಲು ಮೇಳದಲ್ಲಿರುವಾಗ ಪೆರುವಾಯಿಯವರೊಂದಿಗಿನ ತಿರುಗಾಟದಲ್ಲಿ ಮಾತುಗಾರಿಕೆಯನ್ನು ಕಲಿತರು. ಯಕ್ಷರಂಗಕ್ಕೆ ನಿಷ್ಟರಾಗಿ , ಛಲದಿಂದ ಯಾವದೇ ಪಾತ್ರಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಗಳಿಸಿದರು. ನಿರಂತರ೧೬ ವರ್ಷಗಳ ಕಾಲ ಕಟೀಲು ಮೇಳದಲ್ಲಿ ತಿರುಗಾಟ ನಡೆಸಿ , ಕಳೆದ ೯ ವರ್ಷಗಳಿಂದ ಹೊಸನಗರ ಮೇಳದಲ್ಲಿ ಪ್ರಧಾನ ವೇಷಧಾರಿಯಾಗಿದ್ದಾರೆ . ಹೊಸನಗರ ಮೇಳ ಶೆಟ್ಟರಿಗೆ ಅಪಾರ ಪ್ರಸಿಧ್ಧಿ ಗಳಿಸುವ ವೇದಿಕೆಯಾಯಿತು . ಸುಪ್ರಸಿಧ್ಧ ಕಲಾವಿದರ ಸಂಸರ್ಗ ಶೆಟ್ಟರಿಗೆ ದೊರೆತು ಪರಿಪೂರ್ಣ ಕಲಾವಿದರಾದರು.
ಅರ್ಥಗಾರಿಕೆಯ ನೈಪುಣ್ಯತೆ ಸಾಧಿಸಿದ ಶೆಟ್ಟರ ಅರ್ಥಗಾರಿಕೆ ಬಲು ಸೊಗಸು . ನಿರರ್ಗಳ , ಶೃತಿ , ಲಯಬದ್ದವಾದ ಮಾತುಗಾರಿಕೆ , ಉತ್ತಮ ನಾಟ್ಯ ಹಾಗೂ ಅಭಿನಯ , ಪಾತ್ರದ ಸ್ವಭಾವ ಅರಿತು, ಪಾತ್ರಕ್ಕೆ ಚಿತ್ರಣ ಕೊಡುವದು ಶೆಟ್ಟರ ವಿಶೇಷತೆ . ಯಾವದೇ ಪಾತ್ರ ನಿರ್ವಹಿಸುವದಾದರೂ, ಆ ಪಾತ್ರಗಳ ಬಗ್ಗೆ ಆಳವಾದ ಅಧ್ಯಯನ ನಡೆಸಿ , ಆ ಪಾತ್ರಕ್ಕೆ ನ್ಯಾಯ ಒದಗಿಸುವವರು. ಶೆಟ್ಟರ ಅರ್ಥಗಾರಿಕೆಯಲ್ಲಿ
" ಪೆರುವಾಯಿ ಶೈಲಿ " ಗುರುತಿಸಬಹುದು . ಶೆಟ್ಟರ ವಾದ ಸಂವಾದ , ಮಂಡನೆ ಖಂಡನೆ , ಪೀಠಿಕಾ ನಿರೂಪಣೆ ಎಲ್ಲಾ ಆಕರ್ಷಣೀಯ . ವಾದಕ್ಕೆ ನಿಂತರಂತೂ ಪ್ರೇಕ್ಷಕರಿಗೆ ಸಾಹಿತ್ಯದ ರಸದೌತಣ.ಪುರಾಣಲೋಕವನ್ನೇ ಅನಾವರಣಗೊಳಿಸುವ ಶೈಲಿ ಶೆಟ್ಟರಿಗೆ ಚೆನ್ನಾಗಿ ಸಿಧ್ದಿಸಿದೆ .ಹೊಸನಗರ ಮೇಳ ಸೇರಿದ ನಂತರ ಸುಪ್ರಸಿಧ್ಧ ವಾಗ್ಮಿ ದಿ. ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟರ ಎದುರು ಅರ್ಥ ಹೇಳಿ ಮಿಂಚಿ
" ಶೆಟ್ಟಿದ್ವಯ " ರ
ಸಂಭಾಷಣೆ ಆಸ್ವಾದಿಸಲಿಕ್ಕಾಗಿಯೇ ಪ್ರೇಕ್ಷಕರು ಕಾತುರದಿಂದಿರುತ್ತಿದ್ದರು ಎಂಬುದು ಈಗ ಇತಿಹಾಸ . ತಾಳಮದ್ದಳೆ ಕೂಟದಲ್ಲೂ ಈ
" ಶೆಟ್ಟಿದ್ವಯ " ಜೋಡಿ ಪ್ರಸಿಧ್ಧಿ ಪಡೆದಿತ್ತು .ಚೆನ್ನಪ್ಪ ಶೆಟ್ಟರ ಅಕಾಲಿಕ ನಿಧನ ಜಯಪ್ರಕಾಶ ಶೆಟ್ಟರಿಗೂ ಆಘಾತ ತಂದದ್ದು ಸತ್ಯ.
ರಾಜವೇಷ , ಪುಂಡುವೇಷ , ನಾಯಕ ಪ್ರತಿನಾಯಕ , ಸಾತ್ವಿಕ, ಖಳ ---- ಹೀಗೆ ಎಲ್ಲಾ ಪಾತ್ರಗಳನ್ನೂ ನಿರ್ವಹಿಸುವ ಶೆಟ್ಟರು , ಭಾವನಾತ್ಮಕ ಪಾತ್ರಗಳಾದ " ಮಾನಿಷಾದ " ದ ಲಕ್ಷ್ಮಣ , ರುಕ್ಮಾಂಗದ , ನಳ, ಹರಿಶ್ಚಂದ್ರ , ಕುಶಲವದ ಶ್ರೀರಾಮ ಮುಂತಾದ ಪಾತ್ರಪೋಷಣೆಯಲ್ಲಿ ಪರಕಾಯಪ್ರವೇಶ ಮಾಡಿ , ತಾವೇ ಅಳುವದಲ್ಲದೇ ಪ್ರೇಕ್ಷಕರೂ ಅಳುವಂತೆ ಭಾವನಾತ್ಮಕವಾಗಿ ನಿರ್ವಹಿಸುತ್ತಾರೆ . ಪ್ರತಿಜ್ಞೆಯ , ವಿಜಯದ, ಪರ್ವದ ಭೀಷ್ಮ , ಶ್ರೀರಾಮ , ಶ್ರೀಕೃಷ್ಣ ,ಕರ್ಣ, ಕೌರವ , ಜಾಂಬವ, ದಕ್ಷ , ವಾಲಿ, ವಿಷ್ಣು , ಅತಿಕಾಯ, ಋತುಪರ್ಣ , ಹನೂಮಂತ , ರಕ್ತಬೀಜ , ಜಾಬಾಲಿ, ಅರುಣಾಸುರ ---
ಹೀಗೆ ಎಲ್ಲಾ ಪಾತ್ರಗಳು , ಶೆಟ್ಟರ
" ಮಾಸ್ಟರ್ ಪೀಸ್ "
ತಾಳಮದ್ದಳೆ ಕೂಟಗಳಲ್ಲಿ ದಿ.ಚೆನ್ನಪ್ಪ ಶೆಟ್ಟಿ , ಮೂಡಂಬೈಲು, ಡಾ| ಜೋಷಿ , ಸುಣ್ಣಂಬಳ , ಉಜ್ರೆ ಅಶೋಕ್ ಭಟ್ , ಶಂಭುಶರ್ಮ , ಜಬ್ಬಾರ್ , ಗೋವಿಂದ ಭಟ್ , ಕೊಳ್ಯೂರು, ಕಲ್ಚಾರ್, ಹಿರಣ್ಯ, ವಾ. ರಂಗಾ ಭಟ್ , ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿ , ತಾರನಾಥ ವರ್ಕಾಡಿ ಮುಂತಾದ ಘಟಾನುಘಟಿಗಳೊಂದಿಗೆ ಅರ್ಥ ಹೇಳಿ ಮಿಂಚಿದ್ದಾರೆ .
ಸರಳ , ಸಜ್ಜನಿಕೆಯ ಯುವಕಲಾವಿದ ಜಯಪ್ರಕಾಶ ಶೆಟ್ಟರ ಪ್ರತಿಭೆ ಗುರುತಿಸಿ ಹಲವಾರು ಕಡೆ ಸಂಮಾನ ನಡೆದಿವೆ. ಶೆಟ್ಟರು ಪ್ರಾಯದಲ್ಲಿ ಕಿರಿಯವರಾದ ಕಾರಣ ಯಕ್ಷರಂಗದಲ್ಲಿ ಇನ್ನೂ ಸಾಧನೆ ಮಾಡಲು ವಿಪುಲ ಅವಕಾಶವಿದೆ . ಶೆಟ್ಟರು ಇನ್ನಷ್ಟು ಉಜ್ವಲರಾಗಿ ಮೆರೆಯುತ್ತಾರೆಂಬ ವಿಶ್ವಾಸ ನನಗಿದೆ . ಶೆಟ್ಟರಿಂದ ಇನ್ನಷ್ಟು ಸಾಧನೆಗಳು ಮೂಡಿ ಬರಲಿ , ಇನ್ನೂ ಅನೇಕ ಸಂಮಾನಗಳಿಗೆ ಭಾಜನರಾಗಲಿ ಎಂದು ಹಾರೈಸುತ್ತಾ , ಜನ್ಮ ದಿನದ ಈ ಸಂದರ್ಭದಲ್ಲಿ , ಶುಭವನ್ನು ಹಾರೈಸುತ್ತೇನೆ .
ಎಂ . ಶಾಂತರಾಮ ಕುಡ್ವ
ಮೂಡಬಿದಿರೆ

No comments:

Post a Comment