Tuesday 31 May 2016

ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿ- ಒಂದು ನೆನಪು

ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿ- ಒಂದು ನೆನಪು
ದಿ. ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟರು ವಿಧಿವಶರಾಗಿ ಇಂದಿಗೆ ಎರಡು ವರ್ಷಗಳು ಸಂದಿತು .( ೨೨.೦೩.೧೪ ರಂದು ನಿಧನ ಹೊಂದಿದ್ದರು ) ಅವರ ನೆನಪಿಗಾಗಿ ಈ ಕಿರು ಬರಹ .

ದಿ. ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿ ಯಕ್ಷಮಾತೆ ಹೆತ್ತ ಅನರ್ಘ್ಯ ರತ್ನಗಳಲ್ಲೊಂದು. ಪ್ರಸಿಧ್ಧಿಯ ಉತ್ತುಂಗ ಶಿಖರದಲ್ಲಿರುವಾಗಲೇ ಅಗಲಿದುದು ನಿಜಾರ್ಥದಲ್ಲಿಯೇ ಯಕ್ಷರಂಗಕ್ಕಾದ ದೊಡ್ಡ ನಷ್ಟ . ಅಸ್ಖಲಿತ
ಮಾತುಗಾರಿಕೆ , ಸ್ಪಷ್ಟೋಚ್ಛಾರದ ವಾಕ್ಯಗಳ ಚೆಲುವಿಕೆ, ಭಾವಾರ್ಥ , ಶಬ್ದಾರ್ಥಗಳ ವಿವರಣೆಯೊಂದಿಗೆ ಸಂಸ್ಕ್ರತ ಶ್ಲೋಕಗಳ ಬಳಕೆ, ಜೈಮಿನಿಭಾರತ ಹಾಗೂ ಪ್ರಸಿಧ್ಧ ಕವಿವರೇಣ್ಯರ ಸಾಹಿತ್ಯವನ್ನು ಸಂದರ್ಬೋಚಿತವಾಗಿ ಉಲ್ಲೇಖಿಸುವ ಕುಶಲಗಾರಿಕೆ ಇದೆಲ್ಲಾ ಮೇಳೈಸಿದರೆ
" ಚೆನ್ನಪ್ಪ ಶೆಟ್ಟರ ಅರ್ಥಗಾರಿಕೆ "
ಆಗುತ್ತದೆ . ಆದರೆ ಇದೆಲ್ಲಾ ಈಗ ಕೇವಲ ನೆನಪು ಮಾತ್ರ .
ರಾಯಿ ವಾಸುಶೆಟ್ಟಿ - ಲಿಂಗಮ್ಮ ದಂಪತಿಗಳ ಸುಪುತ್ರರಾಗಿ ೧೯೫೨ರಲ್ಲಿ ಜನಿಸಿದ ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟರು ಕೃಷಿಕ
ಕುಟುಂಬದವರು. ಯಕ್ಷಗಾನದತ್ತ ಆಕರ್ಷಿತರಾದ ಶೆಟ್ಟರು ತಮ್ಮ ೧೨ ನೇ ವಯಸ್ಸಿನಲ್ಲಿ ಶಾಲೆ ಬಿಟ್ಟು ಸಿದ್ದಕಟ್ಟೆಯ ಪ್ರಸಿಧ್ದ ಅರ್ಥಧಾರಿ, ತಮ್ಮ ಬಂಧುಗಳಾದ ಕುತ್ಲೋಡಿ ವಾಸುಶೆಟ್ಟರ
ಬಳಿ ಯಕ್ಷಗಾನದ ಪ್ರಾಥಮಿಕ ಹೆಜ್ಜೆಗಳನ್ನು ಕಲಿತರು. ಮುಂದೆ ಧರ್ಮಸ್ತಳ ಕೇಂದ್ರಕ್ಕೆ ಸೇರಿ ಕುರಿಯ ವಿಠಲ ಶಾಸ್ತ್ರಿ ಹಾಗೂ ಪಡ್ರೆ ಚಂದುರವರಲ್ಲಿ ಶಿಷ್ಯತ್ವ ಸ್ವೀಕರಿಸಿದರು.ಅರ್ಥಗಾರಿಕೆಯಲ್ಲಿ ಕಾಂತ ರೈ ಮೂಡಬಿದಿರೆ ಹಾಗೂ ವಾಸುಶೆಟ್ಟರಲ್ಲಿ ಅನುಭವ ಪಡೆದರು.ಕೊರ್ಗಿಯವರ ಸಂಪರ್ಕದಿಂದ ಮಾತುಗಾರಿಕೆಯ ಪಾಂಡಿತ್ಯ ಪಡೆದರು. ಬಡಗಿನ ನಾಟ್ಯವನ್ನು ಹೆರಂಜಾಲು ವೆಂಕಟರಮಣ ಗಾಣಿಗ ಹಾಗೂ ರಾಮ ನಾಯಿರಿಯವರಿಂದ ಕಲಿತರು. ಮಲ್ಲ ಮೇಳ, ಕಟೀಲು, ಧರ್ಮಸ್ತಳ ,ಬಪ್ಪನಾಡು , ಮಧೂರು , ಕದ್ರಿ , ಬಡಗಿನ ಪೆರ್ಡೂರು, ಸಾಲಿಗ್ರಾಮ ಮುಂತಾದ ಮೇಳಗಳಲ್ಲಿ ದುಡಿದು ಕೊನೆಗಾಲದಲ್ಲಿ ತೆಂಕುತಿಟ್ಟಿನ ಸುಪ್ರಸಿಧ್ಧ ಹೊಸನಗರ ಮೇಳದ ಪ್ರಧಾನ ಕಲಾವಿದರಾಗಿದ್ದರು.
ಚೆನ್ನಪ್ಪ ಶೆಟ್ಟರು ಉತ್ತಮ ಅಂಗ ಸೌಷ್ಟವದ , ನೇರ ಮಾತಿನ, ಯಾವದೇ ದುಶ್ಚಟ ಹೊಂದಿಲ್ಲದ ಅಪರೂಪದ ಕಲಾವಿದರು . ಆರೋಗ್ಯದ ಕುರಿತಾಗಿ ಅಪಾರ ಕಾಳಜಿ ಉಳ್ಳವರು .ಯಾವದೇ ಪಾತ್ರ ನಿರ್ವಹಿಸಲು ಬೇಕಾದ ಸುಂದರ ರೂಪ ಉಳ್ಳವರು. ನೋಡಲು ಗಂಭೀರವಾಗಿ ಕಾಣುತ್ತಾರಾದರೂ , ತಮಾಷೆ ಸ್ವಭಾವ ಉಳ್ಳವರು ಎಂದು ಹೆಚ್ಚಾಗಿ ಯಾರಿಗೂ ತಿಳಿದಿಲ್ಲ. ತಮ್ಮ ಆಪ್ತವಲಯದ ಸ್ನೇಹಿತರಲ್ಲಿ ಮಾತ್ರ ವಿನೋದ ಪ್ರವೃತ್ತಿಯ ಗುಣ ತೋರ್ಪಡಿಸುತ್ತಿದ್ದರು. ಶೃಂಗಾರ , ಕರುಣ, ವೀರ ರಸಗಳನ್ನು ರಂಗದಲ್ಲಿ ಪರಿಣಾಮಕಾರಿಯಾಗಿ ಅಬಿವ್ಯಕ್ತಪಡಿಸುತ್ತಿದ್ದ ಶೆಟ್ಟರು ಹಾಸ್ಯ ರಸವನ್ನೂ ಅಷ್ಟೇ ಚೆನ್ನಾಗಿ ಪೋಷಣೆ ಮಾಡುತ್ತಿದ್ದರು. ಹಾಸ್ಯಗಾರರ ಪಾತ್ರಕ್ಕೆ
ಸ್ಪಂದಿಸುತ್ತಿದ್ದರು. ಸುಪ್ರಸಿಧ್ಧ ಹಾಸ್ಯ ಪಾತ್ರಧಾರಿ ಸೀತಾರಾಮ ಕುಮಾರರು ಹೇಳುವಂತೆ ,ಅವರ ಹಾಸ್ಯಕ್ಕೆ ಸಾಹಿತ್ಯ ಒದಗಿಸುತ್ತಿದ್ದುದು ಚೆನ್ನಪ್ಪ ಶೆಟ್ಟರೇ.
" ಶನೀಶ್ವರ ಮಹಾತ್ಮೆ " ಯ ಶೆಟ್ಟರ ವಿಕ್ರಮಾದಿತ್ಯನ ಎದುರು ಸೀತಾರಾಮರ " ಸಾಯಿಬ " ,
" ನಾಗವಲ್ಲಿ " ಯ ಮಂತ್ರವಾದಿ ,
" ಚಂದ್ರಾವಳಿ " ಯ ಚಂದಗೋಪ ಇತ್ಯಾದಿ ಪಾತ್ರಗಳು ಶೆಟ್ಟರಿಂದಾಗಿ ಸೀತಾರಾಮರಿಗೆ ಅಪಾರ ಪ್ರಸಿಧ್ಧಿ ತಂದು ಕೊಟ್ಟಿದ್ದವು. ಸೂಕ್ಷ್ಮಜೀವಿಯಾದ ಶೆಟ್ಟರು , ತಮ್ಮನ್ನು ಯಾರಾದರೂ ವಿನಾಕಾರಣ ನಿಂದಿಸಿದರೆ ಅಥವಾ ಅಗೌರವ ತೋರಿದರೆ ತುಂಬಾ ನೊಂದುಕೊಳ್ಳುತ್ತಿದ್ದರು . ಇದನ್ನೆಲ್ಲಾ ಬೇಸರದಿಂದ ನನ್ನಲ್ಲಿ ಹೇಳುವಾಗ, ಎಷ್ಟೋ ಸಲ ನಾನೇ ಸಮಾಧಾನ ಪಡಿಸಿದ್ದೆ . ತಮ್ಮ ಶುಧ್ಧ , ನಿರ್ಮಲ ವ್ಯಕ್ತಿತ್ವದ ಜೀವಮಾನದಲ್ಲಿ ಒಬ್ಬರಿಂದಲೂ ಧನ ಸಹಾಯ ಯಾಚಿಸಿದವರಲ್ಲ , ಸಹಾಯಾರ್ಥ ಯಕ್ಷಗಾನ ಆಡಿಸಿದವರೂ ಅಲ್ಲ .
ತಂಬಾ ಸ್ವಾಭಿಮಾನಿಗಳು .
ಚೆನ್ನಪ್ಪ ಶೆಟ್ಟರೊಂದಿಗೆ ನನ್ನ ಮಿತ್ರತ್ವ ಸುಮಾರು ೨೫ ವರ್ಷಗಳಿಂದ .
ಕಟೀಲು ಮೇಳದಲ್ಲಿರುವಾಗ ಶೆಟ್ಟರ ಜಾಬಾಲಿ, ಬೃಹ್ಮ , ಚಂಡ, ವಿಶ್ವಾಮಿತ್ರ , ಅರ್ಜುನ, ಕರ್ಣ, ಋತುಪರ್ಣ ಮುಂತಾದ ಪಾತ್ರಗಳನ್ನು ನಾನು ತುಂಬಾ ನೋಡಿದ್ದರೂ, ಆ ಕಾಲದಲ್ಲಿ ನನಗೆ ಶೆಟ್ಟರನ್ನು ಮಾತಾಡಿಸುವಷ್ಟು ಸಲುಗೆಯಿರಲಿಲ್ಲ .ಅವರು ಕರ್ನೂರು ಕೊರಗಪ್ಪ ರೈಗಳ ಕದ್ರಿ ಮೇಳ ಸೇರಿದ ನಂತರವೇ ನನಗೆ ಶೆಟ್ಟರೊಂದಿಗೆ ಮಿತ್ರತ್ವ ಬೆಳೆದದ್ದು . ಆ ಕಾಲದಲ್ಲೇ ಶೆಟ್ಟರು ಅರ್ಥಗಾರಿಕೆಯಲ್ಲಿ ಪ್ರಭುತ್ವ ಸಾಧಿಸಿದ್ದರು. ಆಗ ನಾನು ಪತ್ರಿಕೆಯಲ್ಲಿ
" ಸಿಧ್ದಿ ಇದ್ದೂ , ಪ್ರಸಿಧ್ಧಿ ಹೊಂದದ ಕಲಾವಿದರು "
ಎಂಬ ಶೀರ್ಷಿಕೆಯಲ್ಲಿ ಲೇಖನ ಬರೆದಿದ್ದೆ. ಅದರಲ್ಲಿ ಏಳೆಂಟು ಕಲಾವಿದರ ಪರಿಚಯ ಮಾಡಿ, ಶೆಟ್ಟರನ್ನು ವಿಶೇಷವಾಗಿ ಉಲ್ಲೇಖಿಸಿದ್ದೆ . ಶೆಟ್ಟರು ಆ ಲೇಖನ ಓದಿ , ಕರ್ನೂರರ ಮೂಲಕ ನನ್ನ ಪರಿಚಯ ಮಾಡಿಕೊಂಡರು. ಅಲ್ಲಿಂದ ನಮ್ಮ ಮಿತ್ರತ್ವ ಬೆಳೆಯಿತು. ಅವರ ವೈಯುಕ್ತಿಕ ಸಮಸ್ಯೆಗಳನ್ನು ನನ್ನಲ್ಲಿ ಹೇಳುವಷ್ಟು ನಮ್ಮ ಮಿತ್ರತ್ವ ಗಟ್ಟಿಯಾಯಿತು .ಶೆಟ್ಟರು ಆ ಕಾಲದಲ್ಲಿ ಸುಪ್ರಸಿಧ್ಧ ಅರ್ಥಧಾರಿಗಳಾಗಿದ್ದರೂ, ಪೂರ್ಣಮಟ್ಟದ " ದೊಡ್ಡ ಕೂಟ " ಗಳಲ್ಲಿ
ಗುರುತಿಸಿಕೊಂಡಿರಲಿಲ್ಲ. ನಾನೊಮ್ಮೆ ಅವರಿಗೆ " ಶೇಣಿ " ಯವರ ಮಾಗಧನಿಗೆ ಭೀಮನ ಪಾತ್ರ ಕೊಟ್ಟೆ . ಅಲ್ಲಿಂದ ಶೆಟ್ಟರು ಹಿಂದೆ ನೋಡಿದ್ದೇ ಇಲ್ಲ.ಹಲವಾರು ದೊಡ್ಡ ಕೂಟಗಳಿಗೆ ಬೇಡಿಕೆ ಪಡೆದುಕೊಂಡರು. ಕೆಲವೇ ವರ್ಷಗಳಲ್ಲೇ ಅತ್ಯಂತ ಬೇಡಿಕೆಯ ಕಲಾವಿದರೆಂದು ಗುರುತಿಸಲ್ಪಟ್ಟರು. ತಾಳಮದ್ದಳೆಗೆ " ಅನಿವಾರ್ಯ ಕಲಾವಿದ " ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಚೆನ್ನಪ್ಪ ಶೆಟ್ಟರು ಕಲಿತದ್ದು ಕೇವಲ ೫ ನೇ ತರಗತಿ ಎಂಬುದನ್ನು ಯಾರೂ ನಂಬಲು ಸಾಧ್ಯವಿಲ್ಲ. ನಿರರ್ಗಳವಾಗಿ ಸಂಸ್ಕ್ರತ ಶ್ಲೋಕಗಳನ್ನು ಹೇಳುವಾಗ ಶೆಟ್ಟರು ಪದವೀದರರಿರಬಹುದೆಂದು ಅನಿಸುತ್ತದೆ . ಈ ಬಗ್ಗೆ ನಾನು ಶೆಟ್ಟರಲ್ಲೇ ಹೇಳಿದಾಗ ಅವರು ನಕ್ಕು ಹೇಳಿದ್ದು.
" ಕುಡ್ವರೇ , ನಾನು ವಿಶ್ವವಿದ್ಯಾಲಯದಲ್ಲಿ ಕಲಿತವನಲ್ಲ.
ಆದರೂ " ವಿಶ್ವ " ಎಂಬ
"ವಿದ್ಯಾಲಯ " ದಿಂದ ಬೇಕಾದಷ್ಟು ಕಲಿತಿದ್ದೇನೆ "
ಎಂಥಹಾ ಮಾರ್ಮಿಕವಾದ ಮಾತು! !

ಯೌವನದ ಕಾಲದಲ್ಲಿ ಶೆಟ್ಟರು ಎದುರು ಕಲಾವಿದರನ್ನು ಸ್ವಲ್ಪ ಮಟ್ಟಿಗೆ
" ಕೆಣಕುವ " ಸ್ವಭಾವ ಹೊಂದಿದ್ದರು. ಸಹ ಕಲಾವಿದರು ಪೂರ್ವತಯಾರಿಯೊಂದಿಗೆ ರಂಗಕ್ಕೆ ಬರಬೇಕೆಂಬ ಉದ್ದೇಶದಿಂದ ಈ ರೀತಿ ಮಾಡುತ್ತಿದ್ದರೇ ಹೊರತು, ಅವರನ್ನು ಅವಮಾನ ಪಡಿಸುವದಕ್ಕಾಗಿರಲಿಲ್ಲ.
( ಪತ್ರಿಕಾ ಸಂದರ್ಶನ ಒಂದರಲ್ಲಿ ಶೆಟ್ಟರು ಈ ರೀತಿ ಹೇಳಿದ್ದರು )
" ಯಕ್ಷರಂಗದ ಭೀಷ್ಮ " ಎಂದೇ ಖ್ಯಾತರಾದ ಡಾ| ಶೇಣಿ ಗೋಪಾಲಕೃಷ್ಣ
ಭಟ್ಟರಿಗೂ , ಚೆ. ಶೆಟ್ಟರಿಗೂ ಭಾರೀ ವಾದವಾಗಿತ್ತು ಎಂದು ಆ ಕಾಲದಲ್ಲಿ ಭಾರೀ ಪ್ರಚಾರದಲ್ಲಿತ್ತು . ಆದರೆ ಯಾವ ಪ್ರಸಂಗದಲ್ಲಿ ಎಂದು ಯಾರಿಗೂ ತಿಳಿದಿರಲಿಲ್ಲ. ನಾನು ಶೆಟ್ಟರಲ್ಲೇ ಈ ಬಗ್ಗೆ ವಿಚಾರಿಸಿದೆ. ಆಗ ಶೆಟ್ಟರು
" ಕುಡ್ವರೇ , ಅಂಥಹದೇನೂ ನಡೆದಿಲ್ಲ. ಇದೆಲ್ಲಾ ಅಂತೆಕಂತೆಗಳು. ಪಾರಿಜಾತ ಪ್ರಸಂಗದಲ್ಲಿ ನಾನು ಶ್ರೀಕೃಷ್ಣನಾಗಿ ರುಕ್ಮಿಣಿಯೊಂದಿಗಿರುವ ಸಂದರ್ಭ. ಶೇಣಿಯವರ ನಾರದ. ನಾನು ದಂಪತಿಗಳು ಒಟ್ಟಿಗಿರುವಾಗ ಬೃಹ್ಮಚಾರಿಗಳು ಬರಬಹುದೇ ಎಂದು ಕೇಳಿದ್ದೆ. ಅದಕ್ಕೆ ಶೇಣಿಯವರು " ಇದು ಯಾವ ಶಾಸ್ತ್ರದಲ್ಲುಂಟು ? ಬಂದಲ್ಲಿ ಏನೂ ತಪ್ಪಿಲ್ಲ " ಎಂದು ಸುಂದರವಾಗಿ ವಿವರಣೆ ಕೊಟ್ಟಿದ್ದರು .
ಅಷ್ಟೇ ಹೊರತು ಬೇರೇನೂ ಇಲ್ಲ . ಶೇಣಿಯವರಂಥಹ ವಿದ್ವಾಂಸರಲ್ಲಿ ನಾನು ವಾದ ಮಾಡಲಿಕ್ಕುಂಟೇ ? " ಎಂದು ಹೇಳಿದ್ದರು .
ಚೆನ್ನಪ್ಪ ಶೆಟ್ಟರು ಗರಿಗರಿಯಾದ ಫೈರನ್ ಧರಿಸಿ , ಹೆಗಲಲ್ಲಿ ಶಲ್ಯ ಧರಿಸಿ , ಹಸನ್ಮುಖರಾಗಿ ಅರ್ಥಗಾರಿಕೆಗೆ ಕುಳಿತುಕೊಳ್ಳುವದನ್ನು ನೋಡುವದೇ ಆನಂದ . ತಮ್ಮ ಪಾತ್ರ ಯಾವದೇ ಆಗಿರಲಿ , ಪೂರ್ವ ತಯಾರಿಯೊಂದಿಗೆ ಬರುವದು ಶೆಟ್ಟರ ಕ್ರಮ. ಅರ್ಥಕ್ಕೆ ಕುಳಿತುಕೊಳ್ಳುವ ಒಂದು ಘಂಟೆಗೆ ಮೊದಲೇ ಪಾತ್ರದಲ್ಲಿ ತಾದ್ಯಾತ್ಮ ಹೊಂದುತ್ತಿದ್ದರು . ಈ ಸಮಯ ಶೆಟ್ಟರು ಯಾರಲ್ಲೂ ಮಾತಾಡುವದೇ ಇಲ್ಲ. ಪರಿಚಯಸ್ತರಿಗೆ ಕೇವಲ ಮುಗುಳ್ನಕ್ಕು ನಮಸ್ಕರಿಸುವದು ಮಾತ್ರ. ಶೆಟ್ಟರು ತಮ್ಮ ಅಂದಿನ ಪಾತ್ರದಲ್ಲೇ
" ಮುಳುಗಿರುತ್ತಾರೆ " ತಮ್ಮ ಎದುರಾಳಿ ಕಲಾವಿದರನ್ನು ಗೌರವಿಸುವ ಶೆಟ್ಟರು , ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸುವ ಜಾಯಮಾನದವರು.ಇತ್ತೀಚೆಗೆ ತಾಳಮದ್ದಳೆಯಲ್ಲೂ ಒಂದು ರೀತಿಯ "ಹೊಂದಾಣಿಕೆ " ಬೆಳೆದು ಬಂದಿದೆ.
( ಕ್ರೀಡೆಯಲ್ಲಿ " Match fixing " ಇದ್ದಂತೆ ತಾಳಮದ್ದಳೆಯಲ್ಲೂ ಇಂತಿಷ್ಟೇ ಮಾತಾಡುವ ಹೊಂದಾಣಿಕೆ)
ಆದರೆ , ಶೆಟ್ಟರು ಇಂಥಹ ಹೊಂದಾಣಿಕೆ ಮಾಡುವವರಲ್ಲ. ವಾದಕ್ಕೆ ಪ್ರತಿವಾದ , ಮಂಡನೆಗೆ ಖಂಡನೆ ಮಾಡುವವರು. ಹಾಗೆಂದು ಸೋಲಬೇಕಾದ ಪಾತ್ರಗಳು
ಸೋಲಲೇಬೇಕು ಎಂದು ಪ್ರತಿಪಾದಿಸುವವರು . ಪಾತ್ರಗಳು ಗೆಲ್ಲಬೇಕೇ ಹೊರತು ಪಾತ್ರಧಾರಿಗಳು ಗೆಲ್ಲಕೂಡದು ಎಂದು ಯಾವಾಗಲೂ ಹೇಳುತ್ತಿದ್ದರು .ಹಾಗಾಗಿಯೇ ಶೆಟ್ಟರು ಕೂಟಗಳಿಗೆ ಬೇಕೇ ಎಂದು ಸಂಘಟಕರು ಹಂಬಲಿಸುವದು.
ಶೆಟ್ಟರ ಅರ್ಥಗಾರಿಕೆಯಲ್ಲಿ ಶೇಣಿಯವರ ಗಾಂಭೀರ್ಯ , ರಾ.ಸಾಮಗರ ವ್ಯಾಕರಣಬಧ್ಧ
ಸಾಹಿತ್ಯ , ತೆಕ್ಕಟ್ಟೆ - ಕೊರ್ಗಿಯವರ ವೈಚಾರಿಕತೆ , ಅಳಿಕೆಯವರ ಗತ್ತು ಎಲ್ಲಾ ಮೇಳೈಸಿತ್ತು. ಅರ್ಥಗಾರಿಕೆಯಲ್ಲಿ ಸ್ವಲ್ಪ ಮಟ್ಟಿಗೆ ಶೇಣಿಯವರ ಛಾಯೆಯಿತ್ತು .
ಹಾಗೆಂದು ಯಾರದ್ದೂ ಅನುಕರಣೆ ಇರಲಿಲ್ಲ ಎಂಬುದು ವಾಸ್ತವ.
ಶೆಟ್ಟರ ಸ್ಮರಣಶಕ್ತಿ ಅದ್ಭುತ . ಮೂಡಬಿದಿರೆಯಲ್ಲಿ ನಮ್ಮ
" ಯಕ್ಷಸಂಗಮ " ದವರಿಂದ ಜರಗಿದ
" ಭೀಷ್ಮಪರ್ವ " ಪ್ರಸಂಗ.ಶೆಟ್ಟರ ಕೌರವ
ಹಿರಿಯ , ಪ್ರಸಿಧ್ಧ ಅರ್ಥಧಾರಿಗಳ ಭೀಷ್ಮ .ಅಂದು ಶೆಟ್ಟರಿಗೂ , ಆ ಹಿರಿಯ ಅರ್ಥಧಾರಿಗಳಿಗೂ ಸ್ವಲ್ಪ ಬಿಸಿಬಿಸಿ ಚರ್ಚೆಯಾಗಿತ್ತು . ಇದರಿಂದ ಆ ಹಿರಿಯ ಅರ್ಥಧಾರಿಗಳು " ಇನ್ನು ಮುಂದೆ ಚೆ. ಶೆಟ್ಟರ ಎದುರು ಅರ್ಥ ಹೇಳುವದಿಲ್ಲ " ಎಂದರು. ನನ್ನಲ್ಲೂ ಹಾಗೇ ತಿಳಿಸಿದ್ದರು. ಆ ಹಿರಿಯ ಅರ್ಥಧಾರಿಗಳೂ ಸಜ್ಜನರು, ಹೃದಯ ವೈಶಾಲ್ಯವನ್ನು ಹೊಂದಿದವರು . ಆದರೂ ಏನೋ ವಿಷಘಳಿಗೆಯಿರಬೇಕು,
ಅಂಥಹ ಘಟನೆ ನಡೆಯಿತು. ನಾನು ಈ ವಿಷಯ ಶೆಟ್ಟರಲ್ಲಿ ತಿಳಿಸಿರಲಿಲ್ಲ. ಆದರೂ ಶೆಟ್ಟರಿಗೆ ಬೇರೆಯವರ ಮೂಲಕ ಈ ವಿಷಯ ತಿಳಿಯಿತೇನೋ ?ಎರಡು ತಿಂಗಳ ನಂತರ ನನ್ನಲ್ಲಿ ಮಾತಾಡುವಾಗ
" ಕುಡ್ವರೇ , ಅಂದು ನಾನೇನೂ ತಪ್ಪು ಮಾತಾಡಿಲ್ಲ. ನಾನು ಈ ರೀತಿ ಮಾತಾಡಿದ್ದು " ಎಂದು ಅಂದು ಹೇಳಿದ್ದನ್ನು ನನ್ನಲ್ಲಿ ಪುನಃ ಹೇಳಿದರು.ನಾನು ಮನೆಗೆ ಹೋಗಿ ಆ ಕಾರ್ಯಕ್ರಮದ ಸಿ.ಡಿ. ನೋಡಿದಾಗ ಶೆಟ್ಟರು ನನ್ನಲ್ಲಿ ಹೇಳಿದ್ದೇ , ಒಂದಕ್ಷರ ಸಹಾ ಬದಲಾಗದ ರೀತಿಯಲ್ಲೇ , ಸಿ.ಡಿ.ಯಲ್ಲಿತ್ತು . ಅಂಥಹ ಸ್ಮರಣ ಶಕ್ತಿ ಶೆಟ್ಟರದಾಗಿತ್ತು . ಮುಂದೆ ಆ ಹಿರಿಯ ಕಲಾವಿದರೂ, ಅದನ್ನೆಲ್ಲಾ ಮರೆತು ಶೆಟ್ಟರ ಎದುರು ತುಂಬಾ ಸಲ ಅರ್ಥ ಹೇಳಿ ಹೃದಯವೈಶಾಲ್ಯವನ್ನು ತೋರಿದ್ದರು.
ಶೆಟ್ಟರು ಸದಾ ಸ್ಮರಿಸುವ ಕಲಾವಿದರು ಶೇಣಿ , ತೆಕ್ಕಟ್ಟೆ , ಶಂ.ನಾ.ಸಾಮಗ ಹಾಗೂ ರಾ. ಸಾಮಗರು.ನನ್ನಲ್ಲಿ ಮಾತಾಡುವಾಗಲೆಲ್ಲಾ " ಈ ಪ್ರಸಂಗದ ಈ ಪದ್ಯಕ್ಕೆ ಶೇಣಿಯವರು ಹೇಗೆ ಅರ್ಥ ಹೇಳಿದ್ದಾರೆ ? " ಎಂದೆಲ್ಲಾ ಕೇಳುತ್ತಿದ್ದರು. ರಾ.ಸಾಮಗರ ಮಾತಿನ ಶೈಲಿ ಶೆಟ್ಟರಿಗೆ ತುಂಬಾ ಹಿಡಿಸಿತ್ತು. ಕೆಲ ಸಲ ವಿನೋದವಾಗಿ ಸಾಮಗರ ಶೈಲಿಯಲ್ಲೇ ನನ್ನಲ್ಲಿ ಮಾತಾಡುತ್ತಿದ್ದರು.
ದಿ. ಕೊರ್ಗಿ, ಕುತ್ಲೋಡಿ ವಾಸುಶೆಟ್ಟಿ ಹಾಗೂ ಡಾ| ಶಿಮಂತೂರು ನಾರಾಯಣ ಶೆಟ್ಟರಲ್ಲಿ ಅಪಾರ ಗುರು ಭಾವನೆ ಹೊಂದಿದ್ದರು. ಏನಾದರೂ ಕ್ಲಿಷ್ಟ ಪ್ರಶ್ಣೆಗಳಿದ್ದರೆ ಈ ಮೂವರಲ್ಲಿ ಕೇಳಿ ತಿಳಿಯುತ್ತಿದ್ದರು. ಒಮ್ಮೆ ಕೊರ್ಗಿಯವರ ಎದುರು ವಾದ ನಡೆಯುವಾಗ ಶೆಟ್ಟರ ಮಾತಿಗೆ ಪ್ರೇಕ್ಷಕರಿಂದ ಚಪ್ಪಾಳೆ ಬಂತು.ಕೂಡಲೇ ಶೆಟ್ಟರು ಸಭೆಗೆ ಕೈ ಮುಗಿದು ಚಪ್ಪಾಳೆ ತಟ್ಟಬೇಡಿ ಎಂದು ಸನ್ನೆ ಮೂಲಕ ತಿಳಿಸಿದರು. ಎದುರಿರುವವರು ತಮ್ಮ ಗುರುಗಳು ಎಂಬ ನೆಲೆಯಲ್ಲಿ . ಇದನ್ನು ಕೊರ್ಗಿಯವರು ಗಮನಿಸಿದರು . ಗುಣಗ್ರಾಹಿಗಳಾದ ಕೊರ್ಗಿಯವರೂ
" ಏನಿಲ್ಲ , ನಿಮ್ಮ ಕೆಲಸ ನೀವು ಮಾಡಿ " ಎಂದು ಸಭೆಯನ್ನು ಉದ್ದೇಶಿಸಿ ನುಡಿದದ್ದು ಈಗಲೂ ನೆನಪಲ್ಲಿ ಉಳಿಯುವಂಥಹದು. ಎಂಪೆಕಟ್ಟೆ ರಾಮಯ್ಯ ರೈ , ಬೋಳಾರ ನಾರಾಯಣ ಶೆಟ್ಟಿ , ಮಿಜಾರು ಅಣ್ಣಪ್ಪ, ಕುಂಬ್ಳೆ , ಪೆರುವಾಯಿ, ಕೊಳ್ಯೂರು, ಮೂಡಂಬೈಲು, ಡಾ|ಜೋಷಿ , ಗೋವಿಂದ ಭಟ್ ಮುಂತಾದ ಹಿರಿಯ ಕಲಾವಿದರಲ್ಲಿ ಮಾತಾಡುವಾಗ
" ಗುರುಗಳೇ " ಎಂದು ಸಂಬೋಧಿಸುತ್ತಿದ್ದರು. ಮೇಲುಕೋಟೆ , ಸುಣ್ಣಂಬಳ, ವಾ.ಸಾಮಗ , ಜಬ್ಬಾರ್, ಉಜ್ರೆ, ಕಲ್ಚಾರ್, ವರ್ಕಾಡಿ, ಶಂಭುಶರ್ಮ , ಪೆರ್ಮುದೆ, ವಾ.ರಂಗಾ ಭಟ್ , ರಾಮಜೋಯಿಸ್, ಸೀತಾರಾಮ, ವಿಶ್ವನಾಥ ಶೆಟ್ಟಿ , ಪದ್ಯಾಣ, ಹೊಳ್ಳ , ಪಟ್ಲ , ಶಂ.ನಾ.ಭಟ್ ಪದ್ಯಾಣ , ಅರುವ , ಕುಕ್ಕುವಳ್ಳಿ , ನವನೀತ ಶೆಟ್ಟಿ , ಶಶಿಕಾಂತ ಸರಪಾಡಿ, ಸಂಜಯಕುಮಾರ್ ಮುಂತಾದ ಕಲಾವಿದರೊಂದಿಗೆ ಆತ್ಮೀಯರಾಗಿದ್ದರು
೨೦೦೮ರಲ್ಲಿ ಶೆಟ್ಟರೊಂದಿಗೆ ನಾನೂ ದುಬೈಗೆ ಹೋಗಿದ್ದೆ . ಮಿತ್ರರಾದ ಗಿರಿಧರ ನಾಯಕರ ಮನೆಯಲ್ಲೇ ನಮ್ಮ ವಾಸ್ತವ್ಯ .
ಶೆಟ್ಟರ ಅಭಿಮಾನಿಗಳು ಅವರನ್ನುದಿನಾ ಊಟಕ್ಕೆ ಕರೆಯುತ್ತಿದ್ದರು. ಶೆಟ್ಟರು ಪ್ರತೀದಿನ ಸಸ್ಯಾಹಾರ ಊಟವನ್ನೇ ಬಯಸುತ್ತಿದ್ದರು. ಅಭಿಮಾನಿಗಳು ನೀವು ಮಾಂಸಾಹಾರ ತಿನ್ನುವದಿಲ್ಲವೇ ಎಂದು ಕೇಳಿದಾಗ ತಮಾಷೆಯಾಗಿ
" ನಾನು ಶ್ರೀರಾಮ , ಶ್ರೀಕೃಷ್ಣ , ವಿಷ್ಣು ಮುಂತಾದ ಸಾತ್ವಿಕ ಪಾತ್ರ ಮಾಡುವವನಲ್ಲವೇ ? ಅದಕ್ಕಾಗಿ ಸಾತ್ವಿಕ ಆಹಾರ ಭುಜಿಸುವದು " ಎನ್ನುತ್ತಿದ್ದರು.
ಕನ್ನಡ, ತುಳು, ತೆಂಕು, ಬಡಗುಗಳಲ್ಲಿ ಅರ್ಥಧಾರಿ ಹಾಗೂ ವೇಷಧಾರಿಯಾಗಿರುವ ಬೆರಳೆಣಿಕೆಯ ಕಲಾವಿದರಲ್ಲಿ ಚೆನ್ನಪ್ಪ ಶೆಟ್ಟರ ಹೆಸರು ಚಿರಸ್ತಾಯಿಯಾಗಿ ಉಳಿದಿದೆ. ನಾನು ಏನಾದರೂ ಪೌರಾಣಿಕ ಕಥೆಗಳ ಬಗ್ಗೆ ತಿಳಿಯಬೇಕೆಂದಿದ್ದರೆ ಮೊದಲು ಫೋನ್ ಮಾಡುವದು ಶೆಟ್ಟರಿಗೆ . ಅವರಿಗೆ ತಿಳಿದಿಲ್ಲವಾದಲ್ಲಿ ಮೂಡಂಬೈಲು ಶಾಸ್ತ್ರಿಗಳಲ್ಲಿ ಕೇಳುವದು. ಶೆಟ್ಟರುಸರಿಯಾದ ಉತ್ತರ ಕೊಟ್ಟರೂ ,
" ಕುಡ್ವರೇ, ಅದು ನೂರಕ್ಕೆ ನೂರು ಸರಿಯಾ ಎಂದು ಪುಸ್ತಕ ನೋಡಿ ಹೇಳುತ್ತೇನೆ " ಎಂದು ಹೇಳಿ ಪುನಃ ಫೋನ್ ಮಾಡುತ್ತಿದ್ದರು. ತಾನು ಹೇಳಿದ್ದು ಸರಿಯೋ ಎಂದು ಅವರನ್ನೇ ಅವರು ಪರೀಕ್ಷೆಗೊಳಪಡಿಸುತ್ತಿದ್ದರು. ಚೆನ್ನಪ್ಪ ಶೆಟ್ಟರ ಮರಣದ ನಾಲ್ಕು ದಿನ ಮೊದಲು ನನ್ನ ಮಿತ್ರರೊಬ್ಬರು
" ಕುಬೇರನ ವಾಹನ ಯಾವದು ? " ಎಂದು ಪ್ರಶ್ಷಿಸಿದರು. ಟಿ.ವಿ.ಒಂದರಲ್ಲಿ ಸ್ಪರ್ಧೆಗಾಗಿ ಆ ಪ್ರಶ್ಣೆ ಬಂದಿತ್ತಂತೆ .ನನಗೆ
ತಿಳಿದಿರದ ಕಾರಣ, ನಾನು ಶೆಟ್ಟರಿಗೆ ಕರೆ ಮಾಡಿ ಕೇಳಿದೆ. ಕೂಡಲೇ ಶೆಟ್ಟರು , ಎಲ್ಲಾ ಅಷ್ಟದಿಕ್ಪಾಲಕರ ವಾಹನ ಅವರ ಹೆಂಡಂದಿರ ಹೆಸರನ್ನೂ ತಿಳಿಸಿದರು .
ತಾರನಾಥ ವರ್ಕಾಡಿಯವರ
" ಬಲ್ಲಿರೇನಯ್ಯಾ " ಯಕ್ಷಗಾನ ಪತ್ರಿಕೆಯಲ್ಲಿ ನನ್ನ ಆತ್ಮೀಯರಾದ ವಿದ್ವಾನ್ ಗಾಳಿಮನೆ ವಿನಾಯಕ ಭಟ್ ರವರು ಪ್ರತೀ ಸಂಚಿಕೆಯಲ್ಲಿ
" ಪೌರಾಣಿಕ ಪದಬಂಧ " ರಚಿಸುತ್ತಿದ್ದರು. ಇದೊಂದು ಸ್ಪರ್ಧೆಯಾಗಲಿ ಎಂಬ ನೆಲೆಯಲ್ಲಿ ನಾನು ಪ್ರತೀ ತಿಂಗಳ ಇಬ್ಬರು ವಿಜೇತರಿಗೆ ಬಹುಮಾನದ ಪ್ರಾಯೋಜಕತ್ವ ನೀಡುತ್ತಿದ್ದೆ . ಅದರಲ್ಲಿ ಬಂದ ಪ್ರಶ್ಣೆಯೊಂದರ ಬಗ್ಗೆ , ಅವರು ಆಸ್ಪತ್ರೆಗೆ ಸೇರುವ ಮುನ್ನಾ ದಿನ ನನ್ನಲ್ಲಿ ಅರ್ಧ ಘಂಟೆ ಮಾತಾಡಿ, ಪದಬಂಧ ಮೆಚ್ಚಿ ಗಾಳಿಮನೆಯವರ ನಂಬ್ರ ಕೇಳಿದ್ದರು. ಅದೇ ಕೊನೆ , ಶೆಟ್ಟರು ಮಾತಾಡದ ಲೋಕಕ್ಕೇ ತೆರಳಿದ್ದರು .
ಮಣಿಪಾಲದ ಕೆ.ಎಂ.ಸಿ .ಆಸ್ಪತ್ರೆಗೆ ಹೋದರೂ , ಅವರು I.C.U. ನಲ್ಲಿದ್ದ ಕಾರಣ ನೋಡಲಾಗಲಿಲ್ಲ . ಅವರ ಅಂತಿಮ ಯಾತ್ರೆಗೆ ಸಾಕ್ಷಿಯಾಗಬೇಕಾಯಿತು.
ಎಂ.ಶಾಂತರಾಮ ಕುಡ್ವ
ಮೂಡಬಿದಿರೆ

No comments:

Post a Comment