Tuesday 31 May 2016

ಮಿಜಾರು ಅಣ್ಣಪ್ಪರು ವಿಧಿವಶ

ಮಿಜಾರು ಅಣ್ಣಪ್ಪರು ವಿಧಿವಶ
೬೮ ವರ್ಷಗಳ ತಿರುಗಾಟ ನಡೆಸಿ ನಿವೃತ್ತರಾದ ಯಕ್ಷರಂಗದ ಸುಪ್ರಸಿಧ್ಧ ಹಾಸ್ಯ ಕಲಾವಿದ " ಹಾಸ್ಯ ಚಕ್ರವರ್ತಿ" ಬಿರುದಾಂಕಿತ ಮಿಜಾರು ಅಣ್ಣಪ್ಪರು ನಿನ್ನೆ ರಾತ್ರಿ ೮.೧೫ ಕ್ಕೆ ( ೦೩.೦೪.೨೦೧೬ ನೇ ಭಾನುವಾರ ) ನಿಧನ ಹೊಂದಿದರು. ಸುಮಾರು ೯೨ ವರ್ಷ ಪ್ರಾಯದ ಅಣ್ಣಪ್ಪರು ಕೊನೆಗಾಲದ ವರೆಗೂ ಆರೋಗ್ಯವಂತರಾಗಿದ್ದರು .
ನಿನ್ನೆ ಬೆಳಿಗ್ಗೆ ಹಾಗೂ ಮಧ್ಯಾಹ್ನ ಆಹಾರವನ್ನು ಸೇವಿಸಿದ್ದ ಅಣ್ಣಪ್ಪರು ರಾತ್ರಿ ೮.೦೦ ಘಂಟೆಗೆ ಊಟಕ್ಕೆ ಕುಳಿತ್ತಿದ್ದರು . ಎರಡು ತುತ್ತು ಅನ್ನ ಸೇವಿಸಿ , ಕೂಡಲೇ ನಿಧನರಾದರು. ಬಹುಷಃ ಹೃದಯಾಘಾತ ಉಂಟಾಗಿರುವ ಸಂಭವವಿರಬಹುದೇನೋ ? ಅಂತೂ ೮.೧೫ ಕ್ಕೆ ಅಣ್ಣಪ್ಪರ ಜೀವನಯಾತ್ರೆ ಅಂತ್ಯಗೊಂಡಿತು .
ಅಣ್ಣಪ್ಪರ ಪಾರ್ಥಿವ ಶರೀರದ ಅಂತಿಮ ದರ್ಶನ ಮಾಡಿ ಬಂದಾಗ, ಅಣ್ಣಪ್ಪರೊಂದಿಗಿನ ನನ್ನ ಆತ್ಮೀಯತೆ ಕಣ್ಣ ಎದುರೇ ಚಿತ್ರ ಕಟ್ಟಿದ್ದು ಸುಳ್ಳಲ್ಲ .
ಮಳೆಗಾಲದಲ್ಲಿ ಯಾವಾಗಲೂ ನನ್ನ ಅಂಗಡಿಗೆ ಬಂದು ನಾಲ್ಕೈದು ಘಂಟೆಗಳ ಕಾಲ ನನ್ನಲ್ಲಿ ಸರಸಮಯವಾಗಿ ಕಾಲ ಕಳೆಯುತ್ತಿದ್ದರು . ಹಾಸ್ಯಮಯವಾಗಿ ರಂಜಿಸುತ್ತಿದ್ದುದು ಈ ಎಲ್ಲಾ ನೆನಪುಗಳು ಮರುಕಳಿಸಿತು .
ನಾಲ್ಕು ತಿಂಗಳ ಹಿಂದೆ " ಕಣಿಪುರ ಪತ್ರಿಕೆ " ಯ ಸಂದರ್ಶನಕ್ಕಾಗಿ, ಸಂಪಾದಕರಾದ ನಾರಾಯಣ ಚಂಬಲ್ತಿಮಾರರೊಂದಿಗೆ , ಸಂದರ್ಶನ ನಡೆಸಿದ ಕೋಣೆಯಲ್ಲೇ , ಇಂದು ಅಣ್ಣಪ್ಪರ ಪಾರ್ಥಿವ ಶರೀರ ಕಂಡಾಗ
" ಮಾನವ ಜನ್ಮ ಎಂಬುದು ನೀರ ಮೇಲಿನ ಗುಳ್ಳೆ " ಎಂಬ ಗಾದೆ ಸ್ಪಷ್ಟವಾಗಿ ಮನದಟ್ಟಾಯಿತು .
" ನಿನ್ನೆ ಜನನ , ಇಂದು ಜೀವನ. ಆದರೂ ನಾಳೆ ಮರಣ " ಎಂಬ ದಾಸವಾಣಿ ಕಿವಿಯಲ್ಲಿ ರಿಂಗಣಿಸಿತು.
ಆದರೂ " ಇಂದು ಜೀವನ " ಎಂಬುದನ್ನು ಸಾರ್ಥಕಗೊಳಿಸಬೇಕಾದುದು ಮಾನವನ ಕರ್ತವ್ಯ . ಅಣ್ಣಪ್ಪರು ಇದನ್ನು ನಿಜವಾಗಿಯೂ ಮಾಡಿ ತೋರಿಸಿದವರು . ಯಕ್ಷರಂಗದಲ್ಲಿ ಹಾಸ್ಯಕ್ಕೆ " ತಾರಾಮೌಲ್ಯ " ತಂದವರು , ತುಳುಜಾನಪದ ಪ್ರಸಂಗಗಳ ಹಾಸ್ಯ ಪಾತ್ರಗಳಿಗೆ ಜೀವಂತ ಚಿತ್ರಣ ಕೊಟ್ಟು ಅಜರಾಮರವಾದವರು. ಸಾವಿರಾರು ಸಂಮಾನ ಪಡೆದು, ಲಕ್ಷಾಂತರ ಅಭಿಮಾನಿಗಳ ಮನ ಗೆದ್ದವರು ಅಣ್ಣಪ್ಪರು . ತಮ್ಮ ಕಲಾಚೈತ್ರ ಯಾತ್ರೆಯಲ್ಲಿ ಒಂದೇ ಕುಟುಂಬದ ಮೂರು ತಲೆಮಾರಿನ ಯಾಜಮಾನ್ಯತೆಯಲ್ಲಿ ತಿರುಗಾಟ ನಡೆಸಿದ ಏಕೈಕ ಯಕ್ಷಗಾನ ಕಲಾವಿದರು ಅಣ್ಣಪ್ಪರು ಮಾತ್ರ ಎಂಬುದು ಬಹುಷಃ ಯಕ್ಷಪ್ರಪಂಚದ ಮಟ್ಟಿಗೆ ದಾಖಲೆಯೇ ಹೌದು .
ನಿನ್ನೆ ತಾನೇ ಯಕ್ಷರಂಗದ ಸವ್ಯಸಾಚಿ , ಯಕ್ಷಗುರುಗಳಾದ ಶ್ರೀ ಗೋವಿಂದ ಭಟ್ಟರು ನನ್ನಲ್ಲಿ ,
" ಕುಡ್ವರೇ , ನಿರಂತರ ೫೦ ವರ್ಷಗಳ ಕಾಲ ಒಬ್ಬರೇ ಯಾಜಮಾನ್ಯತ್ವದಲ್ಲಿ ದುಡಿದ ಕಲಾವಿದರು ಯಾರಾದರೂ ಇದ್ದಾರಾ ? ಅಂಥಹ ಕಲಾವಿದರಾರಾದರೂ ಇದ್ದಲ್ಲಿ ಅವರನ್ನು ಸಂಮಾನಿಸಬೇಕೆಂಬ ಯೋಜನೆ ಇದೆ "
ಎಂದು ನನ್ನಲ್ಲಿ ಪ್ರಶ್ಣಿಸಿದ್ದರು .ಆಗ ನಾನು
" ಒಬ್ಬರೇ ಯಜಮಾನರಲ್ಲಿ ನಿರಂತರ ೫೦ ವರ್ಷಗಳ ಕಾಲ ದುಡಿದವರು ಯಾರೂ ಇಲ್ಲ .ಆದರೂ ಒಂದೇ ಕುಟುಂಬದ ಯಾಜಮಾನ್ಯದಲ್ಲಿ ನಿರಂತರ ೬೮ ವರ್ಷಗಳ ಕಾಲ ದುಡಿದ ಅಣ್ಣಪ್ಪರು ಇಂದಿಗೂ ನಮ್ಮೊಂದಿಗಿದ್ದಾರೆ "
ಎಂದು ನುಡಿದಿದ್ದೆ . ಈ ಮಾತು ಕೇವಲ ೨೪ ಘಂಟೆಗಳಲ್ಲೇ ಮುರಿದು ಹೋಯಿತಲ್ಲಾ " ಎಂದು ನೆನೆದಾಗ ಬೇಸರವಾಗುತ್ತಿದೆ .

ಅಣ್ಣಪ್ಪರ ಅಂತಿಮ ಸಂಸ್ಕಾರ ಇಂದು ಮಧ್ಯಾಹ್ನ ೧೨.೦೦ ಘಂಟೆಗೆ ಜರಗಲಿದೆ ಎಂದು ಅವರ ಸುಪುತ್ರರಾದ ಶ್ರೀ ಸದಾಶಿವರು ತಿಳಿಸಿದ್ದಾರೆ .
ತಾನೂ ನಕ್ಕು , ಪ್ರೇಕ್ಷಕರನ್ನೂ ನಗಿಸಿದ ಅಣ್ಣಪ್ಪರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಆ ಯಕ್ಷ ಕಲಾಮಾತೆಯಲ್ಲಿ , ವೇದಿಕೆಯ ಸರ್ವ ಸದಸ್ಯರ ಪರವಾಗಿ ಪ್ರಾರ್ಥಿಸುತ್ತೇನೆ.
ಎಂ. ಶಾಂತರಾಮ ಕುಡ್ವ
ಮೂಡಬಿದಿರೆ

No comments:

Post a Comment