Tuesday 31 May 2016

ಮಿಜಾರು ಅಣ್ಣಪ್ಪರು

ಮಿಜಾರು ಅಣ್ಣಪ್ಪರು
ಮಂಗಳೂರು ತಾಲೂಕಿನ ಮೂಡಬಿದಿರೆ ಸಮೀಪದ ಊರಾದ
" ಮಿಜಾರು " ಮೂರು ವಿಷಯಗಳಿಂದ ಪ್ರಸಿಧ್ಧಿ ಹೊಂದಿದೆ .
೧ .ಕೈ ಮಗ್ಗದ ಸೀರೆಗಳಿಗಾಗಿ .
೨ . " ಕಾಡು ಹೀರೆ " ( ಪಾಗೀಳ್) ಎಂಬ ಔಷಧಿಯುಕ್ತ ತರಕಾರಿ ಬೆಳೆಗಾಗಿ.
೩ . ಯಕ್ಷರಂಗದ ಸುಪ್ರಸಿಧ್ಧ ಹಾಸ್ಯ ಕಲಾವಿದ ಶ್ರೀ ಮಿಜಾರು ಅಣ್ಣಪ್ಪರಿಂದಾಗಿ .
ತನ್ನ ವ್ಯಕ್ತಿತ್ವದಿಂದಾಗಿ ತಾನು ಹುಟ್ಟಿದ ಊರಿನ ಹೆಸರನ್ನೇ ಎಲ್ಲೆಡೆ ಪಸರಿಸಿದ ೯೨ ವರ್ಷ ವಯಸ್ಸಿನ ಮಿಜಾರು ಅಣ್ಣಪ್ಪರು , ಈಗ ಯಕ್ಷಗಾನದಿಂದ ನಿವ್ರತ್ತರಾದರೂ, ಅವರು ಯಕ್ಷಗಾನಕ್ಕೆ ಕೊಟ್ಟ ಅಮೂಲ್ಯ ಕೊಡುಗೆ ಮರೆಯುವಂತಿಲ್ಲ .ಅಪಾರ ಪೌರಾಣಿಕ ಜ್ಞಾನ, ಸಂದರ್ಭೋಚಿತವಾದ ಹಾಸ್ಯ, ಸಹಕಲಾವಿದರೊಂದಿಗೆ ಹೊಂದಿಕೊಂಡು ಹೋಗುವ ಚಾತುರ್ಯಗಳೊಂದಿಗೆ ಲಕ್ಷಾಂತರ ಪ್ರೇಕ್ಷಕರ ಹೃದಯದಲ್ಲಿ ಸ್ತಾನ ಗಳಿಸಿದವರು ಅಣ್ಣಪ್ಪರು . ಅದರಲ್ಲೂ ತುಳು ಪ್ರಸಂಗಗಳಲ್ಲಿ ಅಣ್ಣಪ್ಪರಷ್ಟು ವಿಜ್ರಂಭಿಸಿದವರು ಯಾರೂ ಇರಲಿಕ್ಕಿಲ್ಲ. ಕೋಟಿಚೆನ್ನಯದ ಪಯ್ಯಬೈದ್ಯ , ಜ್ಯೋತಿಷಿ , ದೇವುಪೂಂಜದ ಲಿಂಗಪ್ಪ ಆಚಾರಿ , ಕೋರ್ದಬ್ಬು ಬಾರಗದ ಕೋರ್ದಬ್ಬುವಿನ ಸಖನ ಪಾತ್ರ ಮುಂತಾದವೆಲ್ಲಾ ಅಣ್ಣಪ್ಪರಿಂದಲೇ ಸ್ರಷ್ಟಿಸಲ್ಪಟ್ಟ ಪಾತ್ರಗಳು. " ಹಾಸ್ಯಚಕ್ರವರ್ತಿ " ,
" ಅಭಿನವ ತೆನಾಲಿ " ಎಂದೆಲ್ಲಾ ರಸಿಕರಿಂದ ನೆಗಳ್ತೆಗೆ ಪಾತ್ರರಾದ ಅಣ್ಣಪ್ಪರು , ಯಕ್ಷಗಾನದ ಹಿನ್ನೆಲೆ ಇಲ್ಲದ ಕುಟುಂಬದಲ್ಲಿ ಜನಿಸಿಯೂ ಆಗಸದೆತ್ತರಕ್ಕೆ ಕೀರ್ತಿಪತಾಕೆ ಹಾರಿಸಿದ ಅಪ್ರತಿಮ ಯಕ್ಷ ಕಲಾವಿದರು .೬೮ ವರ್ಷಗಳ ಕಾಲ ಯಕ್ಷರಂಗವನ್ನು ಹಾಸ್ಯದ ಮೂಲಕ " ಆಳಿದ " ಈ ಶತಮಾನದ ಅಪೂರ್ವ ಕಲಾವಿದರು.
ನಾನು ಚಿಕ್ಕಂದಿನಲ್ಲಿ ತುಳು ಪ್ರಸಂಗ ನೋಡಲು ಮನೆಯಲ್ಲಿ ನನಗೆ ತಂದೆಯವರ ನಿರ್ಭಂಧವಿತ್ತು .ಆದರೂ ನಾನೊಮ್ಮೆ ತಂದೆಯವರ ಕಣ್ಣು ತಪ್ಪಿಸಿ ಕರ್ಣಾಟಕ ಮೇಳದವರ ಆಟಕ್ಕೆ ಹೋದೆ . ಮಧ್ಯರಾತ್ರಿ ಸಮಯ ಒಬ್ಬರ ಹಾಸ್ಯದ ಪ್ರವೇಶ. ಪರದೆ ಎತ್ತಿದ ಕೂಡಲೇ ಆ ಹಾಸ್ಯಗಾರರು
" ವಾ ಒಂಜಿ ಚಳಿ ಮಾರಾಯ್ರೇ "
( ಎಂಥಹ ಚಳಿ ಮಾರಾಯ್ರೇ )
ಎಂದದ್ದೇ ತಡ ಇಡೀ ಸಭೆಯೇ ನಕ್ಕು ಚಪ್ಪಾಳೆ ತಟ್ಟಲಾರಂಭಿಸಿತು . ನಿಜವಾಗಿಯೂ ನನಗೆ ಇದರಲ್ಲೇನೂ ಹಾಸ್ಯ ಕಾಣಲಿಲ್ಲ . ಆದರೂ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಯಾಕೆ ನಕ್ಕಿದ್ದೆಂದು ನನಗೆ ತುಂಬಾ ಆಶ್ಚರ್ಯವಾಯಿತು. ನನ್ನ ಪಕ್ಕದಲ್ಲಿ ಕುಳಿತವರಲ್ಲಿ ಈ ಬಗ್ಗೆ ವಿಚಾರಿಸಿದಾಗ ಅವರು ಹೇಳಿದ್ದು .
" ಅವರು ಸುಪ್ರಸಿಧ್ಧ ಹಾಸ್ಯಗಾರರಾದ ಮಿಜಾರು ಅಣ್ಣಪ್ಪರು. ಅವರು ಈಗ ಹೇಳಿದ್ದು ಹಾಸ್ಯವಲ್ಲದಿರಬಹುದು. ಆದರೆ , ಮುಂದೆ ಅವರಿಂದ ಬರುವ ಹಾಸ್ಯಗಳಿಗೆ ಜನರ ಮೆಚ್ಚುಗೆ ಇದು "
ಎಂದರು .ಅಣ್ಣಪ್ಪರ ಪ್ರವೇಶಕ್ಕೇ ಪ್ರೇಕ್ಷಕರ ಸ್ಪಂದನೆಯಿದು .
ನಾನು ಅಣ್ಣಪ್ಪರ ಹೆಸರು ಕೇಳಿದ್ದರೂ ಅವರ ಪಾತ್ರ ಅಂದೇ ಪ್ರಥಮವಾಗಿ ನೋಡಿದ್ದು . ನಂತರ ಅಣ್ಣಪ್ಪರಿಂದ ಹಾಸ್ಯದ ಹೊನಲೇ ಹರಿಯಿತು. ನಾನೂ ಅವರ ಅಭಿಮಾನಿಯಾದೆ. ಕರ್ಣಾಟಕ ಮೇಳದ ಆಟಗಳ ಖಾಯಾಂ ಪ್ರೇಕ್ಷಕನಾದೆ . ಮೆಲ್ಲಗೇ ಚೌಕಿಗೆ ಹೋಗಿ ಅಣ್ಣಪ್ಪರ ಪರಿಚಯ ಮಾಡಿಕೊಂಡೆ . ಕಾಲಕ್ರಮೇಣ ಅಣ್ಣಪ್ಪರೂ ನಾನೂ ತುಂಬಾ " ಆಪ್ತ " ರಾದೆವು.
ಅಣ್ಣಪ್ಪರಿಗೆ ವಿಜಯ , ಮಕರಂದ , ದಾರುಕ , ಬಾಹುಕ , ಮುಂತಾದ ಪೌರಾಣಿಕ ಪಾತ್ರಗಳು ಅಪಾರ ಜನಪ್ರಿಯತೆಯನ್ನು ತಂದು ಕೊಟ್ಟರೂ , ಅಣ್ಣಪ್ಪರಿಗೆ ಪ್ರಸಿಧ್ಧಿಯನ್ನು ತಂದದ್ದು ತುಳು ಪ್ರಸಂಗಗಳ ವಿಭಿನ್ನ ಪಾತ್ರಗಳು.ಕೋಟಿಚೆನ್ನಯ , ದೇವುಪೂಂಜ ಪ್ರತಾಪ , ಕಾಂತಾಬಾರೆ ಬುದಬಾರೆ , ಕೋರ್ದಬ್ಬುಬಾರಗ, ಜಾಲಕೊರತಿ ಮುಂತಾದ ತುಳುನಾಡಿನ ಜಾನಪದ ಆಧಾರಿತ ಪ್ರಸಂಗಗಳ ಎಲ್ಲಾ ಹಾಸ್ಯ ಪಾತ್ರಗಳಿಗೆ ಮೂಲಚಿತ್ರಣ ಕೊಟ್ಟವರೇ ಅಣ್ಣಪ್ಪರು . ಉಳಿದ ಮೇಳಗಳ ಹಾಸ್ಯಗಾರರೆಲ್ಲಾ ಅಣ್ಣಪ್ಪರ ಚಿತ್ರಣವನ್ನೇ ಅನುಕರಿಸಿಕೊಂಡು ಹೋದದ್ದೆಂಬುದು ಸತ್ಯ . ಕಾಲ್ಪನಿಕ ತುಳು ಪ್ರಸಂಗಗಳಾದ ಕಾಡಮಲ್ಲಿಗೆಯ ಚೋಂಕ್ರ , ದಳವಾಯಿ ದುಗ್ಗಣ್ಣದ ಕಂಪಣಮೂಲ್ಯ , ಕೌಡೂರ ಬೊಮ್ಮೆಯ ಬೊಮ್ಮ , ಬೊಳ್ಳಿಗಿಂಡೆಯ ಹೆಡ್ಡ ಕೇಚುಬಲ್ಲಾಳ ಮುಂತಾದ ಪಾತ್ರಗಳು ಅಣ್ಣಪ್ಪರನ್ನು ಉತ್ತುಂಗಶಿಖರಕ್ಕೇರಿಸಿದ ಪಾತ್ರಗಳು .
ಶುಧ್ಧ ತುಳು ಭಾಷೆಯನ್ನೇ ಆಡುವ
" ಕೆಲವೇ " ಬೆರಳೆಣಿಕೆಯ ಕಲಾವಿದರಲ್ಲಿ ಅಣ್ಣಪ್ಪರೂ ಓರ್ವರೆಂಬುದು ಉಲ್ಲೇಖನೀಯ." ಸಾಮಗ, ಕೊಳ್ಯೂರು ಹಾಗೂ ಅಣ್ಣಪ್ಪರ " ಜೋಡಿ ಅತ್ಯಂತ ಪ್ರಸಿಧ್ಧ . ಕರ್ಣಾಟಕ ಮೇಳ ಪ್ರಸಿಧ್ಧಿ ಪಡೆಯಲು ಮಿಜಾರು ಅಣ್ಣಪ್ಪರ ಕೊಡುಗೆಯೂ ಅಪಾರ. ತಮ್ಮ ೬೮ ವರ್ಷಗಳ ಸುದೀರ್ಘ ತಿರುಗಾಟದಲ್ಲಿ ೬೦ ವರ್ಷಗಳನ್ನು ಒಂದೇ ಮನೆತನದ , ಮೂರು ತಲೆಮಾರಿನ ಯಜಮಾನರಲ್ಲೇ ಕಳೆದಿರುವದು , ಇವರ ಸ್ವಾಮಿನಿಷ್ಟೆಗೆ ಉತ್ತಮ ಉದಾಹರಣೆ . ( ದಿ. ಕೊರಗ ಶೆಟ್ಟಿ , ದಿ. ವಿಟ್ಟಲ ಶೆಟ್ಟಿ ಹಾಗು ದೇವಿಪ್ರಸಾದ್ ಶೆಟ್ಟಿ . )
ಅತ್ಯಂತ ಬಡತನದಲ್ಲಿ ಕುಡುಬಿ ಜನಾಂಗದಲ್ಲಿ ಹುಟ್ಟಿ ಜೀವನೋಪಾಯಕ್ಕಾಗಿ ಯಕ್ಷಗಾನವನ್ನೇ ಅವಲಂಬಿಸಿದವರು ಅಣ್ಣಪ್ಪರು . ಕರ್ಣಾಟಕ ಮೇಳ ಸೇರಿದ ಪ್ರಾರಂಭದಲ್ಲಿ ರಾಕ್ಷಸ ಪಾತ್ರ ಮಾಡುತ್ತಿದ್ದ ಅಣ್ಣಪ್ಪರು , ದಿ. ಕೊರಗಶೆಟ್ಟರ ಒತ್ತಾಯದ ಮೇರೆಗೆ ಹಾಸ್ಯಪಾತ್ರ ಮಾಡಲು ತಯಾರಾದರು .ಅದರಲ್ಲಿ ಯಶಸ್ವಿಯೂ ಆದರು . ಹೀಗೆ ದಿ. ಕೊರಗ ಶೆಟ್ಟರ ದೂರದರ್ಶಿತ್ವದಿಂದಾಗಿ ಯಕ್ಷರಂಗಕ್ಕೆ ಅನರ್ಘ್ಯ ಹಾಸ್ಯಗಾರರೊಬ್ಬರ ಸೃಷ್ಟಿಯಾಯಿತು .ಅಣ್ಣಪ್ಪರು ಯಾವದೇ ದುಶ್ಚಟಗಳನ್ನು ಹೊಂದದ ಕಾರಣ ದುಡಿಮೆಯಿಂದಲೇ ಆಸ್ತಿ ಗಳಿಸಿ ಉತ್ತಮ ಕೃಷಿಕರೆಂಬ ಪ್ರಸಿಧ್ಧಿಯನ್ನೂಹೊಂದಿದವರು . ಲಕ್ಷಾಂತರ ಅಭಿಮಾನಿಗಳ ಕಣ್ಮಣಿಯಾದ ಅಣ್ಣಪ್ಪರು ಸಾವಿರಾರು ಸಂಮಾನ ಪಡೆದವರು .೧೫ ವರ್ಷಗಳ ಹಿಂದೆ ಬೆಂಗಳೂರಿನ ಜಡ್ಜ್ ಓರ್ವರು , ಮಂಗಳೂರಿನಿಂದ ಮೂಡಬಿದಿರೆಯ ತಮ್ಮ ಸಂಬಂಧಿಕರ ಮನೆಗೆ ಬರುತ್ತಿದ್ದರು . ದಾರಿಯಲ್ಲಿ ಮಿಜಾರು ತಲುಪಿದಾಗ ಪ್ರತಿಷ್ಟಿತ ಬಂಟ ಸಮಾಜದ ಆ ಜಡ್ಜ್ ರವರು ,
" ಸುಪ್ರಸಿಧ್ಧ ಹಾಸ್ಯಗಾರ ಅಣ್ಣಪ್ಪರ ಊರಲ್ಲವೇ ಇದು ? "
ಎಂದು ತಮ್ಮ ಕಾರಿನ ಚಾಲಕರಲ್ಲಿ ವಿಚಾರಿಸಿ ಹೌದೆಂದು ಗೊತ್ತಾದ ಕೂಡಲೇ ನೇರವಾಗಿ ಅಣ್ಣಪ್ಪರ ಮನೆಗೇ ತೆರಳಿ ಅಣ್ಣಪ್ಪರ ಯೋಗಕ್ಷೇಮ ವಿಚಾರಿಸಿ ,
ಮುಂದಿನ ತಿಂಗಳಲ್ಲಿ ತಮ್ಮ ಮನೆಯಲ್ಲಿ ಜರಗಲಿರುವ ಖಾಸಗೀ ಸಮಾರಂಭಕ್ಕೆ ಬರಲೇಬೇಕೆಂದು ಆಹ್ವಾನಿಸಿದರು . ಮೂಡಬಿದಿರೆಯ ತಮ್ಮ ಸಂಬಂದಿಕರಲ್ಲೂ ಈ ವಿಷಯ ತಿಳಿಸಿ , ಅಣ್ಣಪ್ಪರನ್ನು ಬೆಂಗಳೂರಿಗೆ ಕರೆತರುವ ವ್ಯವಸ್ತೆಯನ್ನೂ ಮಾಡಿದರು. ಬೆಂಗಳೂರಿನಲ್ಲಿ ಅಣ್ಣಪ್ಪರಿಗೆ ಪಂಚತಾರಾ ಹೊಟೇಲಲ್ಲಿ ಉಳಕೊಳ್ಳುವ ವ್ಯವಸ್ತೆ ಮಾಡಿ , ಸಾಯಂಕಾಲದ ಸಮಾರಂಭದಂದು ಅಣ್ಣಪ್ಪರನ್ನು ವೇದಿಕೆಯಲ್ಲೇ ಕುಳ್ಳಿರಿಸಿ ಅದ್ದೂರಿ ಸಂಮಾನದೊಂದಿಗೆ ಅಲ್ಲಿ ನೆರೆದ ಅತಿಥಿಗಳಿಗೆ ಪರಿಚಯಿಸಿ ₹ ೧೦,೦೦೦/ ನಗದು ನೀಡಿದರು . ಆ ಕಾಲದಲ್ಲಿ ಇದು ದೊಡ್ಡ ಮೊತ್ತ ಎಂಬುದು ಗಮನಾರ್ಹ . ಇದಾಗಿ ಪ್ರತೀವರ್ಷ ಅಣ್ಣಪ್ಪರನ್ನು ಬೆಂಗಳೂರಿಗೆ ಕರೆಸಿ ಸಂಮಾನಿಸುತ್ತಿದ್ದರು . ( ಈ ವಿಷಯವನ್ನು ಅಣ್ಣಪ್ಪರೇ ನನಗೆ ತಿಳಿಸಿದ್ದರು )
ಅಣ್ಣಪ್ಪರೊಂದಿಗೆ ನನಗೆ ಸುಮಾರು ೩೦ ವರ್ಷಗಳ ಒಡನಾಟ . ಸುಪ್ರಸಿಧ್ದ ಕಲಾವಿದರಾದರೂ ನಿಗರ್ವಿ , ಸರಳಬದುಕಿನ ಹಸನ್ಮುಖದ ವ್ಯಕ್ತಿ . ಸದಾ ಬಿಳಿಪಂಚೆ ಹಾಗೂ ಶರ್ಟ್ ಧರಿಸುವ ಜೀವನಶೈಲಿ. ನಿಜ ಜೀವನದಲ್ಲೂ ಹಾಸ್ಯಪ್ರವೃತ್ತಿ ಉಳ್ಳವರು . ನನ್ನನ್ನು
" ಧನಿಗಳೇ " ಎಂದು ಸಂಬೋಧಿಸುವಾಗ ನಾನು ಎಷ್ಟೋ ಸಲ ಆಕ್ಷೇಪಿಸಿ ನಿಮ್ಮಂಥಹ ಶ್ರೇಷ್ಟ ಕಲಾವಿದರು ಆ ರೀತಿ ಕರೆಯುವದು ನನಗೆ ಮುಜುಗರಕ್ಕೆ ಕಾರಣವಾಗುತ್ತದೆ ಎಂದರೂ , ಆ " ಚಾಳಿ " ಬಿಟ್ಟವರೇ ಅಲ್ಲ . ಉತ್ತಮ ಕೃಷಿಕರಾದ ಅಣ್ಣಪ್ಪರು , ತಮ್ಮ ಮನೆಯಲ್ಲಿ ಬೆಳೆಸುತ್ತಿದ್ದ
" ಕಾಡುಹೀರೆ " ಯನ್ನು ವರ್ಷಕ್ಕೆರಡು ಭಾರಿ , ನನ್ನ ಅಂಗಡಿಗೆ ತಂದು
" ಧನಿಗಳಿಗೆ ಬುಲೆ ಕಾಣಿಕೆ " ಎಂದು ತಂದು ಕೊಡುತ್ತಿದ್ದರು . ( ತಮ್ಮ ಯಜಮಾನರಾದ ವಿಟ್ಟಲ ಶೆಟ್ಟಿ , ನಿಟ್ಟೆ ಭಾಸ್ಕರ ಶೆಟ್ಟಿ ಹಾಗು ನನಗೆ ಮಾತ್ರ ಇದನ್ನು ನೀಡುತ್ತಿರುವದು ಎಂದು ನನ್ನಲ್ಲಿ ತಿಳಿಸಿದ್ದರು )
ನಾನು ಹಿಂದೊಮ್ಮೆ " ಹೊಸದಿಗಂತ " ಪತ್ರಿಕೆಯಲ್ಲಿ ಅವರ ಸಂಪೂರ್ಣ ವ್ಯಕ್ತಿ ಪರಿಚಯದ ಲೇಖನ ಬರೆದಿದ್ದೆ . ಅಣ್ಣಪ್ಪರ ಸಮಗ್ರ ಪರಿಚಯವನ್ನು ಬರೆದಿದ್ದೆ .ಅಣ್ಣಪ್ಪರು ಆ ಪತ್ರಿಕೆಯನ್ನು ಜತನದಿಂದ ತೆಗೆದಿಟ್ಟು ಎಲ್ಲರಿಗೂ ಓದಲು ಕೊಟ್ಟು
" ಇದನ್ನು ಬರೆದದ್ದು , ನಮ್ಮ ಕುಡ್ವರು "
ಎಂದು ಸಂಭೃಮಿಸಿದ್ದದ್ದು ನನಗೆ ಈಗಲೂ ನೆನಪಿದೆ . ಮಳೆಗಾಲದಲ್ಲಿ ಯಾವಾಗಲೂ ನನ್ನ ಅಂಗಡಿಯಲ್ಲಿ ನಾಲ್ಕೈದು ಘಂಟೆಗಳ ಕಾಲ ನನ್ನೊಂದಿಗೆ ಮಾತಾಡುವ ಪರಿಪಾಠ ಹೊಂದಿದ್ದರು . " ಗುರುಗಳೇ ,ನಿಮಗೇನು ತರಲಿ " ಎಂದು ಕೇಳಿದರೆ " ಮೂರು ಬೀಡಾ ಹಾಗೂ ಎರಡು ಲಿಂಬೆಯ ಚಾಕಲೇಟ್ ತರಿಸಿ " ಎಂದು ಮುಗ್ಧತೆಯಿಂದ ಎನ್ನುತ್ತಿದ್ದರು . ಒಮ್ಮೆ ಅಣ್ಣಪ್ಪರೊಂದಿಗೆ ತಮಾಷೆಗಾಗಿ ಅಭ್ಯಾಸವಿಲ್ಲದಿದ್ದರೂ ಹೊಗೆಸೊಪ್ಪು ಮಿಶ್ರಿತ ಬೀಡಾ ತಿಂದು ತಲೆಸುತ್ತು ಬಂದಾಗ ಅಣ್ಣಪ್ಪರೇ ನನ್ನನ್ನು ಸಂಭಾಳಿಸಿ ಇನ್ನು ಮುಂದೆ ನೀವು ಬೀಡಾ ತಿನ್ನ ಬಾರದು ಎಂದು
" ಆಜ್ಞಾಪಿಸಿದ್ದರು "
ಅಣ್ಣಪ್ಪರ ಎಲ್ಲಾ ಹಾಸ್ಯಪಾತ್ರಗಳೂ ಶ್ರೇಷ್ಡ ಮಟ್ಟದ್ದೇ . ಆದರೂ ನನಗೆ ಅತ್ಯಂತ ಇಷ್ಟವಾದದ್ದು " ದಳವಾಯಿ ದುಗ್ಗಣ್ಣ " ದ " ಕಂಪಣಮೂಲ್ಯ " ಅಮಾಯಕ ಮುಗ್ಧನ ಪಾತ್ರವದು . ಕಂಪಣನ ಮುಗ್ಧತೆಯನ್ನು ಮನಮುಟ್ಟುವಂತೆ ಚಿತ್ರಿಸಿದ್ದರು . ಈ ಪ್ರಸಂಗ ನೋಡಲು ನಾನು ಎಷ್ಟೇ ದೂರವಾದರೂ ಹೋಗುತ್ತಿದ್ದೆ , ಅಣ್ಣಪ್ಪರ " ಕಂಪಣ ಮೂಲ್ಯ " ಪಾತ್ರ ನೋಡಲು . ಆ ಪಾತ್ರ ನನ್ನನ್ನು ಅಷ್ಟು ವಶೀಕರಿಸಿತ್ತು . ಆಗೆಲ್ಲಾ ಅಣ್ಣಪ್ಪರು
'' ನೀವು ಇಷ್ಟೆಲ್ಲಾ ದೂರ ಬರಬಾರದು. ನಿಮಗೆ ನಾಳೆ ಅಂಗಡಿಯಲ್ಲಿ ವ್ಯಾಪಾರ ಮಾಡಲಿಕ್ಕಿಲ್ಲವೇ ? "
ಎಂದು ನಯವಾಗಿ ಗದರಿಸುತ್ತಿದ್ದರು .ಆದರೂ " ಕಂಪಣ ಮೂಲ್ಯ " ನನಗೆ ಮರೆಯಲು ಆಗುತ್ತಿರಲಿಲ್ಲ . ಅಣ್ಣಪ್ಪರು ಬೈಯುತ್ತಾರೆಂದು , ಎಷ್ಟೋ ಬಾರಿ , ಚೌಕಿಗೆ ಹೋಗದೇ " ದಳವಾಯಿ ದುಗ್ಗಣ್ಣ " ಪ್ರಸಂಗ ನೋಡಿ , ಅಣ್ಣಪ್ಪರಲ್ಲಿ ಮಾತಾಡದೇ ಹೋದದ್ದು ಉಂಟು .
ಅಣ್ಣಪ್ಪರ ಇನ್ನೊಂದು ಶ್ರೇಷ್ಟ ಪಾತ್ರ
" ಬೊಳ್ಳಿಗಿಂಡೆ " ಪ್ರಸಂಗದ " ಕೇಚು ". ಅರಸನ ಮಗನಾದರೂ ಹೆಡ್ಡನ ಪಾತ್ರವದು . ಇಡೀ ಸಭೆಯನ್ನು ಈ ಪಾತ್ರದ ಮೂಲಕ ಅಣ್ಣಪ್ಪರು ರಂಜಿಸುತ್ತಿದ್ದರು. ರಾ.ಸಾಮಗ , ಕೊಳ್ಳ್ಯೂರು , ಅಣ್ಣಪ್ಪರ ಜೋಡಿ ಸಂಭಾಷಣೆ ಈ ಪ್ರಸಂಗದ ಜೀವಾಳವಾಗಿತ್ತು . " ಕಾಡಮಲ್ಲಿಗೆ " ಯ ಸ್ವಾಮಿನಿಷ್ಟ ಚೋಂಕ್ರ , ಕೌಡೂರ ಬೊಮ್ಮಯ್ಯದ ಪೋಷಕ ಪಾತ್ರವಾದ ಬೊಮ್ಮಯ್ಯ ಎಲ್ಲಾ ಅಣ್ಣಪ್ಪರ ಹೆಸರನ್ನು ಆಗಸದೆತ್ತರಕ್ಕೆ ಏರಿಸಿದ ಪಾತ್ರಗಳು .
ಅರುವ ಕೊರಗಪ್ಪ ಶೆಟ್ಟರ ಋತುಪರ್ಣನಿಗೆ , ಅಣ್ಣಪ್ಪರ ಬಾಹುಕ ನನಗೆ ಅತೀ ಮೆಚ್ಚುಗೆಗೆ ಪಾತ್ರವಾದ ಇನ್ನೊಂದು ಪಾತ್ರ .
( ಹಿಂದೆ ಅಳಿಕೆ ರಾಮಯ ರೈಗಳ ಋತುಪರ್ಣನಿಗೆ ಅಣ್ಣಪ್ಪರ ಬಾಹುಕ ತುಂಬಾ ಪ್ರಸಿಧ್ಧಿಯಾಗಿತ್ತು . )
ನಾನೊಮ್ಮೆ ಬಜ್ಪೆಯ ನಮ್ಮ ಸಂಘದ ಬಯಲಾಟಕ್ಕೆ ಅಣ್ಣಪ್ಪರನ್ನು ಕರೆಸಿ ಸಂಮಾನ ಮಾಡಿದ್ದೆ . " ಭೀಷ್ಮವಿಜಯ " ಪ್ರಸಂಗ . ನನ್ನದ್ದು ಭೀಷ್ಮ , ಅಣ್ಣಪ್ಪರ ವೃಧ್ಧ ಬ್ರಾಹ್ಮಣ . ನಾನು ಬ್ರಾಹ್ಮಣನನ್ನು ಕರೆಸಿ ,
" ಅಯ್ಯಾ ಬ್ರಾಹ್ಮಣೋತ್ತಮರೇ , ಈ ಕೆಲಸಕ್ಕೆ ನೀವೇ ಅರ್ಹರು . ನಿಮ್ಮ ಪ್ರಾಯ ಹಾಗೂ ಯೋಗ್ಯತೆ ನೋಡಿ ಕೆಲವರು ನಿಮ್ಮನ್ನು ' ಅಣ್ಣಾ ' ಎಂತಲೂ , ಕೆಲವರು ' ಅಪ್ಪಾ ' ಎಂತಲೂ , ಕೆಲವರು ಎರಡನ್ನೂ ಸೇರಿಸಿ
" ಅಣ್ಣಪ್ಪ " ಎಂತಲೂ ಕರೆಯುತ್ತಾರೆ ಒಟ್ಟಿನಲ್ಲಿ ನಮ್ಮ ಸಭೆಯಲ್ಲಿ ನೀವೇ ಹಿರಿಯರು " ಎಂದೆ . ಸಬೆ ನೆಗಾಡಿತು . ಆಗ ಅಣ್ಣಪ್ಪರು
" ಹೌದು ಆಚಾರ್ಯರೇ , ಕೊಡುವವರು ಹಾಗೂ ಕೂಡುವವರು ನೀವೇ ಇರುವಾಗ ನನಗೇನು ತೊಂದರೆ " ಎಂದಾಗ ಸಭೆಯಿಡೀ ನಕ್ಕಿತು .
( ಕುಡ್ವ ಶಬ್ದವನ್ನು ಸ್ವಲ್ಪ ತಿರುಗಿಸಿ ಹೇಳಿ ಹಾಸ್ಯರಸ ಸೃಷ್ಟಿಸಿದ್ದರು . )
ಇನ್ನೊಮ್ಮೆ ಬಜ್ಪೆಯಲ್ಲಿ " ಮಾಗಧವಧೆ"
ಶೇಣಿಯವರ ಮಾಗಧ , ಅಣ್ಣಪ್ಪರ ವಿಪ್ರ ಕೃಷ್ಣ , ನಾನು ಹಾಗೂ ನನ್ನ ತಮ್ಮ ಸತೀಶ ಕುಡ್ವನದ್ದು ಬ್ರಾಹ್ಮಣ ವೇಷದ ಭೀಮಾರ್ಜುನರು .
ಅಣ್ಣಪ್ಪರು , ಶೇಣಿಯವರ
ಮಾಗಧನಲ್ಲಿ ಮಾತಾಡುತ್ತಾ ,
" ಇವರಿಬ್ಬರೂ ನನ್ನ ಶಿಷ್ಯಂದಿರು . ನೀನು ಏನೇ ಮಾತಾಡಲಿದ್ದರೂ ನನ್ನಲ್ಲೇ ಮಾತಾಡು.ಮಾತಾಡುವ ಜನರಲ್ಲ ಇವರು " ಎಂದು ಶೇಣಿಯವರಿಗೆ ಸೂಚ್ಯವಾಗಿ ತಿಳಿಸಿ ನಮ್ಮ ಮರ್ಯಾದೆ ಉಳಿಸಿದ್ದರು .
ಇದೀಗ ಮಿಜಾರಲ್ಲಿ ತಮ್ಮ ಮಗನಾದ ಉದ್ಯಮಿ ಸದಾಶಿವರ ಮನೆಯಲ್ಲಿ ನೆಲೆಸಿರುವ ಅಣ್ಣಪ್ಪರು , ಯಕ್ಷಗಾನದಿಂದ ನಿವ್ರತ್ತರಾಗಿದ್ದಾರೆ . ಇಷ್ಟು ದೀರ್ಘ ಕಾಲ ಯಕ್ಷಸೇವೆಗೈದ ಅಣ್ಣಪ್ಪರ ಪಾತ್ರಗಳ ದಾಖಲೀಕರಣವಾಗದಿರುವದು , ಯಕ್ಷರಂಗಕ್ಕಾದ ದೊಡ್ಡ ಹಿನ್ನಡೆ ಎಂದರೆ ತಪ್ಪಾಗಲಾರದು .
ಮುಖ್ಯಪ್ರಾಣ ಕಿನ್ನಿಗೋಳಿ , ಮಿಜಾರು ತಿಮ್ಮಪ್ಪ ರಂಥವರನ್ನು ಶಿಷ್ಯರನ್ನಾಗಿ ರೂಪಿಸಿದ ಅಣ್ಣಪ್ಪರು ಯಕ್ಷರಸಿಕರ ಕಣ್ಮಣಿ .
ಲಕ್ಷಾಂತರ ಯಕ್ಷಪ್ರೇಮಿಗಳನ್ನು ನಗುವಂತೆ ಮಾಡಿದ, ಅಣ್ಣಪ್ಪರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲಿ, ಎಂದು ಪ್ರಾರ್ಥನೆ .
ಎಂ. ಶಾಂತರಾಮ ಕುಡ್ವ ,

No comments:

Post a Comment