Tuesday 31 May 2016

" ಕೃಷ್ಣ ಸಂಧಾನ "


ಅದೊಂದು ಸಣ್ಣ ಹಳ್ಳಿ . ಊರವರೆಲ್ಲಾ ಸೇರಿ ಒಂದು ತಾಳಮದ್ದಳೆ ಮಾಡಲು ಯೋಜಿಸಿದರು. ಪ್ರಸಂಗ
" ಕೃಷ್ಣ ಸಂಧಾನ "
ಸುಪ್ರಸಿಧ್ಧ ಮೇಳದ ಕಲಾವಿದರ, ಕೌರವ, ದಿ. ಸಿಧ್ಧಕಟ್ಟೆ ಚೆನ್ನಪ್ಪ ಶೆಟ್ಟರ ಶ್ರೀಕೃಷ್ಣ ಹಾಗೂ ಸ್ತಳೀಯ ಹವ್ಯಾಸಿ ಕಲಾವಿದರ ವಿದುರ. ಚೆನ್ನಪ್ಪ ಶೆಟ್ಟರು ಆ ಕಾಲದಲ್ಲಿ ಅರ್ಥಗಾರಿಕೆಯಲ್ಲಿ
" ಸಿಧ್ಧಿ " ಹೊಂದಿದ್ದರೂ , " ಪ್ರಸಿದ್ದಿ "
ಗಳಿಸಿರಲಿಲ್ಲ.
ಕೌರವ ಪಾತ್ರಧಾರಿಯು ಆ ಕಾಲದಲ್ಲಿ ವ್ಯಂಗೋಕ್ತಿ , ವಕ್ರೋಕ್ತಿ ಹಾಗೂ ಹಾಸ್ಯಪ್ರಜ್ಞೆಗೆ ಹೆಸರಾದವರು .ವಿದುರ ಪಾತ್ರಧಾರಿಗೂ , ಕೌರವ ಪಾತ್ರಧಾರಿಗೂ , ಜಮೀನಿನ ವಿಷಯದಲ್ಲಿ ನ್ಯಾಯಾಲಯದಲ್ಲಿ ವ್ಯಾಜ್ಯವಿತ್ತು . ಆ ಹವ್ಯಾಸಿ ಕಲಾವಿದರು , ಸ್ತಳೀಯರಲ್ಲಿ ,
" ಈ ದಿನ ಆ ಕೌರವ ಪಾತ್ರಧಾರಿಯ ಮಾನ ಕಳೆಯುತ್ತೇನೆ ಹೇಗೂ ವಿದುರ ಕೌರವನಿಗೆ ನಿಂದಿಸುವ ಪ್ರಕರಣವಿದೆಯಲ್ಲಾ ? ಅದನ್ನೂ ಸೇರಿಸಿ ಮರ್ಯಾದೆ ತೆಗೆಯುತ್ತೇನೆ "
ಎಂದು ಹೇಳಿ ಬಂದಿದ್ದು , ಕೌರವ ಪಾತ್ರಧಾರಿಯ ಕಿವಿಗೂ ಬಿದ್ದಿತ್ತು .
ಅಂತೂ , ವಿದುರನು ಕೌರವನನ್ನು ನಿಂದಿಸಿ ಸಭೆಯಿಂದ ಚಪ್ಪಾಳೆ ಗಿಟ್ಟಿಸಿ
" ವಿಜಯೋತ್ಸವ " ದಿಂದ ವೇದಿಕೆಯಿಂದ ಕೆಳಗಿಳಿದು , ಸಭೆಯ , ಎದುರು ಕುಳಿತರು .
ಕೌರವ ಪಾತ್ರಧಾರಿ , ವಿದುರನಿಗೆ ಉತ್ತರವಾಗಿ ,
" ಈ ವಿದುರ ಏನೇನೋ ಮಾತಾಡಿದನಲ್ಲಾ . ಈತನಲ್ಲಿ ಒಂದು
" ಬಿಲ್ಲು " ಇತ್ತಂತೆ . ಕೆಲವರಿಗೆ ತೋರಿಸಿದ್ದಾನೆಂದೂ ನನ್ನ ಕಿವಿಗೂ ಬಿದ್ದಿತ್ತು .( ಆ ಹವ್ಯಾಸಿ ಕಲಾವಿದ ವಕೀಲರ ಬಿಲ್ಲನ್ನು ಎಲ್ಲರಿಗೂ ತೋರಿಸುತ್ತಿದ್ದನಂತೆ )
" ಕೊನೆಗೂ ಬಿಲ್ಲು ಮುರಿದು ಹೋದನಲ್ಲಾ . ಏನೂ ತೊಂದರೆಯಿಲ್ಲಾ. ಎಲ್ಲಿಯಾದರೂ , ಭೀಷ್ಮಾಚಾರ್ಯರು ನನ್ನನ್ನು ತ್ಯಜಿಸಿದರೆ , ನನ್ನ ಪೌರುಷದ ಸಂಕೇತವಾದ ಮೀಸೆ ಹೋದಂತಾಗುತ್ತಿತ್ತು . ದ್ರೋಣಾಚಾರ್ಯರೆಲ್ಲಿಯಾದರೂ , ನನ್ನನ್ನ ತ್ಯಜಿಸಿದರೆ , ನನ್ನ ಜ್ಞಾನದ ಸಂಕೇತವಾದ ಗಡ್ಡ ಹೋದಂತಾಗುತ್ತಿತ್ತು. ಎಲ್ಲಿಯಾದರೂ , ವೀರ ಕರ್ಣ ನನ್ನನ್ನು ತ್ಯಜಿಸಿದರೆ , ನನ್ನ ಶೌರ್ಯದ ಸಂಕೇತವಾದ ಎದೆಯ ರೋಮ ರಾಶಿಗಳೇ ಹೋದಂತಾಗುತ್ತಿತ್ತು .
ಆದರೂ , ಹೋದವ ವಿದುರನಲ್ಲಾ , ತೊಂದರೆಯಿಲ್ಲ , ಅದರ ಕೆಳಗಿನದು ಹೋಯಿತು , ಎಂದು ತಿಳಿಯುತ್ತೇನೆ "
ಎಂದಾಗ ಸಭೆಯಿಂದ ಭರ್ಜರಿ ಕರತಾಡನ .
ಇದಾದ , ಕೆಲವೇ ದಿನಗಳಲ್ಲಿ ಆ ಹವ್ಯಾಸಿ ಕಲಾವಿದ , ಕೌರವ ಪಾತ್ರಧಾರಿಯ ಮನೆಗೆ ಬಂದು ಜಮೀನಿನ ವ್ಯಾಜ್ಯವನ್ನು , ನ್ಯಾಯಾಲಯದ ಹೊರಗೇ ತೀರ್ಮಾನಿಸಿ , ವ್ಯಾಜ್ಯ ಹಿಂಪಡೆದರು
( ದಿ. ಚೆನ್ನಪ್ಪ ಶೆಟ್ಟರೇ , ನನ್ನಲ್ಲಿ ತಿಳಿಸಿದ ಘಟನೆಯಿದು .)
ಎಂ. ಶಾಂತರಾಮ ಕುಡ್ವ ,
ಮೂಡಬಿದಿರೆ

No comments:

Post a Comment