Thursday 2 July 2015

ಶೇಣಿ ವೈಭವ - ಭಾಗ ೩

ಶೇಣಿಯವರು ೦೭/೦೪/೧೯೧೮ ರಲ್ಲಿ ನಾರಾಯಣ, ಲಕ್ಷ್ಮಿ ಅಮ್ಮ ದಂಪತಿಗಳ ಸುಪುತ್ರರಾಗಿ ಜನಿಸಿದರು. ಕಾಲೇಜ್ ಪೂರೈಸಿ ಮುಂದೆ ಹರಿದಾಸರಾಗಿ ಪ್ರಸಿಧ್ಧಿ ಗಳಿಸಿದರು. ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರ ಶಿಷ್ಯತ್ವ ಪಡೆದರು. ಅಂದಿನ ಕಾಲದ ಸುಪ್ರಸಿದ್ಧ ಅರ್ಥಧಾರಿಗಳಾದ ಕವಿಭೂಷಣ ವೆಂಕಪ್ಪ ಶೆಟ್ಟರ ಸಂಸರ್ಗದಲ್ಲಿ "ಶೇಣಿ" ರೂಪುಗೊಂಡರು. ಯೌವನದ ಕಾಲದಲ್ಲಿ "ಕಲಾಕುಮಾರ" ಎಂಬ ಚಲನಚಿತ್ರದಲ್ಲಿ ನಟಿಸಿದ್ದರು.
ಅಂದಿನ ಕಾಲದ ಘಟಾನುಘಟಿಗಳಾದ ವೆಂಕಪ್ಪ ಶೆಟ್ಟಿ, ಶಂಕರನಾರಾಯಣ ಸಾಮಗ, ದೇರಾಜೆ, ಪೊಳಲಿಶಾಸ್ತ್ರಿ, ನಾರಾಯಣ ಕಿಲ್ಲೆ, ಕುಬಣೂರು ಬಾಲಕೃಷ್ಣ ರಾವ್, ಸುಬ್ರಾಯ ಆಚಾರಿ, ಮೂಡಬಿದ್ರಿ ಕಾಂತ ರೈ ಮುಂತಾದವರ ಒಡನಾಟದಿಂದ ಶೇಣಿಯವರ ಅರ್ಥಗಾರಿಕೆ ವಿಜೃಂಭಿಸಲಾರಂಭಿಸಿತು.
ವೆಂಕಪ್ಪ ಶೆಟ್ಟರ ಎದುರು ಅರ್ಥ ಹೇಳಲು ಆ ಕಾಲದಲ್ಲಿ ಎಲ್ಲರೂ ಹೆದರುತ್ತಿದ್ದರು. ಅಂಥಹ ಪ್ರಖರ ಅರ್ಥಗಾರಿಕೆ ಅವರದು. ಆದರೂ ಶೇಣಿಯವರು ಧೈರ್ಯದಿಂದ ಅವರ ಎದುರು ಅರ್ಥ ಹೇಳಿ ಅವರಿಂದಲೇ ಶಹಬ್ಬಾಸ್ ಗಳಿಸಿದರು. ಶೆಟ್ಟರು ಸಾಯುವ ಕಾಲದಲ್ಲಿ ಶೇಣಿಯವರ ಕೈಯನ್ನು ಕಾಂತ ರೈ ಗಳಲ್ಲಿರಿಸಿ
"ನಾನು ಕಂಡ ಹುಡುಗರಲ್ಲಿ ಈತ ಭರವಸೆ ಮೂಡಿಸಿದವ. ಈತನನ್ನು ನನ್ನ ಪ್ರತಿನಿಧಿ ಎಂದು ತಿಳಿಯಿರಿ"  ಎಂದು ಹೇಳಿ ಕಣ್ಣು ಮುಚ್ಚಿದರು.
ಹೀಗೆ ಶೆಟ್ಟರ ಆಶೀರ್ವಾದದಿಂದ ಶೇಣಿಯವರು ಅರ್ಥಗಾರಿಕೆಯಲ್ಲಿ ಉತ್ತುಂಗ ಶಿಖರವೇರಿದರು. ಅಂದಿನ ಕಾಲದ ಪ್ರತಿಷ್ಠಿತ ಮೇಳವಾದ ಕೂಡ್ಲು ಮೇಳದ ಯಜಮಾನರಾದ ಶಾನುಭಾಗ ಸೋದರರಿಂದ ಶೇಣಿಯವರಿಗೆ ಮೇಳದ ಸಂಚಾಲಕತ್ವ ವಹಿಸಲು ಕರೆ ಬಂದು ಮೂರು ವರ್ಷ ಮೇಳ ನಡೆಸಿ ಮುಂದೆ ಕಸ್ತೂರಿ ಪೈ ಸೋದರರ ಸುರತ್ಕಲ್ ಮೇಳ ಸೇರಿದರು.
ಸುರತ್ಕಲ್ ಮೇಳ ಶೇಣಿಯವರ ವಿಜೃಂಭಣೆಗೆ ವೇದಿಕೆಯಾಯಿತು. ತಿರುಪತಿ ಕ್ಷೇತ್ರ ಮಾಹಾತ್ಮ್ಯದ ಮಾಧವ ಭಟ್ಟ, ಕಡುಗಲಿ ಕುಮಾರ ರಾಮದ ತೊಘಲಕ್, ಬಪ್ಪನಾಡು ಕ್ಷೇತ್ರ ಮಾಹಾತ್ಮ್ಯದ ಬಪ್ಪ ಬ್ಯಾರಿ ಮೊದಲಾದ ಪಾತ್ರಗಳು ಶೇಣಿಯವರಿಂದಾಗಿ ಅಸ್ತಿತ್ವ ಪಡೆದವು.
ಬಪ್ಪನಾಡು ಕ್ಷೇತ್ರ ಮಾಹಾತ್ಯ್ಯವನ್ನು ದಿ. ಅಗರಿ ಶ್ರೀನಿವಾಸ ಭಾಗವತರು ರಚಿಸಿ ಶೇಣಿಯವರ ಸಂಚಾಲಕತ್ವದ ಕೂಡ್ಲು ಮೇಳಕ್ಕೆ ಕೊಟ್ಟು ಅವರ ನಿರ್ದೇಶನದಲ್ಲಿ ಪ್ರಥಮ ಪ್ರಯೋಗ ಏರ್ಪಡಿಸಲಾಗಿತ್ತು. ಅಗರಿಯವರು ಈ ಪ್ರಸಂಗದ ಪಾತ್ರವಾದ ಬೋಧಪ್ರದವಾದ ಬಪ್ಪ ಬ್ಯಾರಿಯ ಪಾತ್ರವನ್ನು ಹಾಸ್ಯಗಾರರಾದ ವಿಟ್ಲ ಜೋಷಿಯವರಿಗೆ ಕೊಟ್ಟಿದ್ದರು. ಆದರೆ ಜೋಷಿಯವರು ಪ್ರಥಮ ಪ್ರಯೋಗದಂದು ಈ ಪಾತ್ರಕ್ಕೆ ಶೇಣಿಯವರೇ ಮಾದರಿಯ ಚಿತ್ರಣ ನೀಡಬೇಕೆಂದು ವಿನಂತಿಸಿಕೊಂಡರು. ಅಂದಿನ ಮಟ್ಟಿಗೆ ಶೇಣಿಯವರು ಬಪ್ಪ ಬ್ಯಾರಿಯ ಪಾತ್ರ ಮಾದರಿಗೆಂದು ಮಾಡಿ ಜೋಷಿಯವರು ‘ಉಸ್ಮಾನ್’ ಎಂಬ ಕಲ್ಪಿತ ಪಾತ್ರ ಮಾಡಿದರು. ಆದರೆ ಅಂದಿನ ಪಾತ್ರ ಬಹಳ ಯಶಸ್ವಿಯಾಗಿ ಈ ಪಾತ್ರ ಶೇಣಿಯವರಿಗೇ ಖಾಯಾಂ ಆಯಿತು. ಒಮ್ಮೆ ಅರ್ಕುಳದಲ್ಲಿ ಈ ಪ್ರದರ್ಶನ ಏರ್ಪಟ್ಟಾಗ ನೂರಾರು ಮುಸ್ಲಿಮರು ಪ್ರತಿಭಟಿಸಲು ಆಟಕ್ಕೆ ಬಂದಿದ್ದರು. ಆದರೂ ಅವರೆಲ್ಲರೂ ಶೇಣಿಯವರು ಕುರಾನಿನ ತಾತ್ಪರ್ಯವನ್ನು ವಿವರಿಸಿದ ಪರಿಯನ್ನು ನೋಡಿ ಇದೆಲ್ಲಾ ನಮಗೆ ಈಗಲೇ ತಿಳಿದದ್ದು ಎಂದು ಹೇಳಿ ಶೇಣಿಯವರಿಗೆ ವಂದಿಸಿ ಹೊರಟರು.
ಶೇಣಿಯವರ ಪ್ರಥಮ ಸಂಸ್ಮರಣೆಯನ್ನು ನಮ್ಮ "ಯಕ್ಷಸಂಗಮ ಮೂಡಬಿದಿರೆ" ವತಿಯಿಂದ ಸಂಘಟಿಸಿದಾಗ ಶೇಣಿಯವರ ಸಮಕಾಲೀನ ಕಲಾವಿದರಾದ ದಿ. ರಾಮದಾಸ ಸಾಮಗರು ಸಂಸ್ಮರಣಾ ಭಾಷಣಕಾರರಾಗಿ
"ಶೇಣಿಯವರು ಮಾಡಿದ ಎಲ್ಲಾ ಪಾತ್ರಗಳನ್ನು ನಾನು ಮಾಡಿದ್ದೇನೆ. ಆದರೆ ಬಪ್ಪ ಬ್ಯಾರಿಯ ಪಾತ್ರ ಮಾತ್ರ ನನ್ನಿಂದ ಇವತ್ತಿಗೂ ಮಾಡಲಿಕ್ಕಾಗಲಿಲ್ಲ"  ಎಂದು ನುಡಿದದ್ದು ನನಗೆ ಈಗಲೂ ನೆನಪಿದೆ.
(ಆಧಾರ : ಶೇಣಿಯವರ ಆತ್ಮ ಕಥನ "ಯಕ್ಷಗಾನ ಮತ್ತು ನಾನು")

O :-  ಎಂ. ಶಾಂತರಾಮ ಕುಡ್ವ, ಮೂಡಬಿದಿರೆ
          M.  Shantharama Kudva, Moodabidri

No comments:

Post a Comment