Thursday 2 July 2015

ದಿ|| ಅಗರಿ ಶ್ರೀನಿವಾಸ ಭಾಗವತರು

ಸುಮಾರು ೧೯೧೦ ರಲ್ಲಿ ಜನಿಸಿದ ಅಗರಿ ಭಾಗವತರು ತೆಂಕುತಿಟ್ಟು ಕಂಡ ಶ್ರೇಷ್ಠ ಭಾಗವತರಲ್ಲಿ ಪ್ರಾತಃ ಸ್ಮರಣೀಯರು. ನೇರ ನಡೆ, ನುಡಿ, ಇದ್ದದ್ದನ್ನು ನೇರವಾಗಿಯೇ ಖಂಡಿಸುವ ಜಾಯಮಾನದವರು. ಯಕ್ಷಗಾನದಲ್ಲಿ ಭಾಗವತರೇ ಪ್ರಥಮ ವೇಷಧಾರಿ ಎಂಬ ಮಾತನ್ನು ಅಕ್ಷರಶಃ ನಿರೂಪಿಸಿದವರು. ಕಲಾವಿದರ ತಪ್ಪನ್ನು ತಿದ್ದಿ ರೂಪಿಸಿದವರು. ಎಷ್ಟೇ ದೊಡ್ಡ ಕಲಾವಿದರಾದರೂ ತಪ್ಪಿದರೆ ನಿರ್ದ್ಯಾಕ್ಷಿಣವಾಗಿ ಹೇಳಿ, ರಂಗದ ಸಂಪ್ರದಾಯ ಉಳಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ ಶ್ರೇಷ್ಠ ಭಾಗವತರು. ಧರ್ಮಸ್ತಳ, ಕುಂಡಾವು, ಕೂಡ್ಲು, ಕಟೀಲು, ಮೂಂಡ್ಕೂರು ಮೊದಲಾದ ಮೇಳಗಳಲ್ಲಿ ತಿರುಗಾಟ ನಡೆಸಿದ ಅಗರಿಯವರು ೨೦೦೧ ರಲ್ಲಿ ಸ್ವರ್ಗಸ್ತರಾದರು.

ಅಗರಿಯವರು, ಮೂಂಡ್ಕೂರು ಮೇಳದಲ್ಲಿದ್ದಾಗ, ಕೌರವನ ಪಾತ್ರಧಾರಿ
"ಬಲ್ಲಿರೇನಯ್ಯಾ,  ಅಯೋಧ್ಯೆಗೆ ಯಾರೆಂದು ತಿಳಿದಿದ್ದೀರಿ?" ಎಂದರು.
ಅಗರಿಯವರಿಗೆ ಕೋಪ ನೆತ್ತಿಗೇರಿ
"ನಿನ್ನ ಅಪ್ಪ ಎಂದು ತಿಳಿದಿದ್ದೇನೆ" ಎಂದರು. ಮರುದಿನ ಆ ಕಲಾವಿದನಿಗೆ
"ನೀನು ಪತ್ತನಾಜೆಗೆ ಬಾ" ಎಂದು ಮನೆಗೆ ಕಳಿಸಿದರು.

ಇನ್ನೊಮ್ಮೆ, ಕಲಾವಿದನೋರ್ವ ಏನೋ ತಪ್ಪು ಹೇಳಿದಾಗ, ಆತನಿಗೆ ಜಾಗಟೆಯ ಕೋಲಿನಿಂದಲೇ,  ರಂಗಸ್ಥಳದಲ್ಲೇ ಕುಟ್ಟಿದರು.

ಅಗರಿಯವರು ದಿ.ಕಲ್ಲಾಡಿ ಕೊರಗ ಶೆಟ್ಟರ ಕುಂಡಾವ್ ಮೇಳದಲ್ಲಿರುವಾಗ, ಕೊರಗ ಶೆಟ್ಟರ ಅಭಿಮಾನಕ್ಕೆ ಪಾತ್ರರಾಗಿದ್ದರು. ಒಮ್ಮೆ ಕುಂಡಾವ್ ಮೇಳಕ್ಕೂ, ಧರ್ಮಸ್ತಳ ಮೇಳಕ್ಕೂ ಜೋಡಾಟ. ಕೊರಗ ಶೆಟ್ಟರೂ, ದಿ. ರತ್ನವರ್ಮ ಹೆಗ್ಗಡೆಯವರೂ ಜೋಡಾಟದ ಷರ್ತದ ಬಗ್ಗೆ ಸಮಾಲೋಚಿಸುತ್ತಿರುವಾಗ ಹೆಗ್ಗಡೆಯವರು ಅಗರಿಯವರನ್ನು ಕರೆಯಲು ಆಳನ್ನು ಕಳಿಸಿದರಂತೆ. ಆ ಆಳು ಬಂದು, ಅಗರಿಯವರಲ್ಲಿ,
“ಧಣಿಗಳು ನಿಮ್ಮನ್ನು ಬರ ಹೇಳಿದ್ದಾರೆ” ಎಂದ. ಅಗರಿಯವರು,
“ನನಗೀಗ ಪುರುಸೊತ್ತಿಲ್ಲ” ಎಂದು ಹಿಂದೆ ಕಳಿಸಿದರು. ಆ ಆಳು ಹೆಗ್ಗಡೆಯವರಲ್ಲಿ ಹಾಗೆಯೇ ಹೇಳಿದ. ಆಗ ಅಲ್ಲೇ ಇದ್ದ ಕೊರಗ ಶೆಟ್ಟರು ಆ ಆಳಿನಲ್ಲಿ
"ಈಗ ಹೋಗಿ, ಅಗರಿಯವರಲ್ಲಿ ನಾನು ಕರೆದಿದ್ದೇನೆಂದು ಹೇಳು"
ಎಂದರಂತೆ. ಆ ಆಳು ಅಗರಿಯವರಲ್ಲಿ
"ಕೊರಗ ಶೆಟ್ಟರು ಕರೆದಿದ್ದಾರೆ"
ಎಂದಾಗ ಕೂಡಲೇ ಹೋದರಂತೆ. ಅಷ್ಟು ಸ್ವಾಮಿನಿಷ್ಠೆ ಅಗರಿಯವರಿಗೆ.

ಒಮ್ಮೆ ಕಲಾವಿದನೋರ್ವ, ಅಸಂಬದ್ಧ ಮಾತಾಡಿದಾಗ ಅಗರಿಯವರು, ಆ ಕಲಾವಿದನಿಗೆ
"ನೀನು ಸಂಬಳದ ಆಶೆಗಾಗಿ ಈ ಕ್ಷೇತ್ರಕ್ಕೆ ಬರುವುದಾದರೆ, ನಾಳೆಯಿಂದ ಬರಬೇಡ. ನಿನಗೆ ಸಂಬಳ ನಾನು ಕೊಡುತ್ತೇನೆ. ನಾಳೆಯಿಂದ ಬರಬೇಡ"
ಎಂದು ಹೇಳಿ, ಆ ಕಲಾವಿದನಿಗೆ ತಮ್ಮ ಕೈಯಿಂದ ಸಂಬಳ ಕೊಟ್ಟು ಮನೆಗೆ ಕಳಿಸಿದರು.
(ಈ ಮೇಲಿನ ಎರಡು ಘಟನೆಯನ್ನು ಅಗರಿಯವರ ಕಟ್ಟಾ ಅಭಿಮಾನಿಯಾದ ದಿ. ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿಯವರು ಹೇಳಿದ್ದು)
ಅಗರಿಯವರು ಕಲಾವಿದರನ್ನು ರಂಗಸ್ಥಳದಲ್ಲೇ ತಿದ್ದುತ್ತಿದ್ದರು. ಶೇಣಿಯಂಥಹ ಕಲಾವಿದರೂ ಇದಕ್ಕೆ ಹೊರತಾಗಿರಲಿಲ್ಲ ಎಂಬುದು ಗಮನಾರ್ಹ.

O :-  ಎಂ. ಶಾಂತರಾಮ ಕುಡ್ವ, ಮೂಡಬಿದಿರೆ
         M.  Shantharama Kudva, Moodabidri

No comments:

Post a Comment