Thursday 2 July 2015

ಶೇಣಿ ವೈಭವ

ಶೇಣಿಯವರು ದಿನಕ್ಕೊಂದು ರಾಮಾಯಣ, ಮಹಾಭಾರತ ರಚಿಸುತ್ತಿದ್ದರು ಎಂದು ದೊಡ್ಡ ದೊಡ್ಡ ವಿದ್ವಾಂಸರು ಕೇವಲ ಸ್ತುತಿಗಾಗಿ ಹೇಳಿದ್ದಲ್ಲ. ಶೇಣಿಯವರ ಅರ್ಥವೈಖರಿಯೇ ಹಾಗಿತ್ತು. ಇಂದು ಹೇಳಿದ ಅರ್ಥ ಮರುದಿನ ಹೇಳುತ್ತಿರಲಿಲ್ಲ. ಮರುದಿನದ ಅರ್ಥವೇ ಬೇರೆ. ಒಂದು ದಿನ ರಾವಣನಾಗಿ
"ಹೆಣ್ಣಿನ ಮೂಲಕ ಪ್ರಾರಂಭವಾದ ಈ ವ್ಯಾಜ್ಯ ಹೆಣ್ಣಿನಿಂದಲೇ ಪರಿಮಾರ್ಜನವಾಗಲಿ ಎಂಬ ಕಾರಣಕ್ಕೆ ಸೀತಾಪಹಾರ ಮಾಡಿದ್ದೆ"
ಎಂದು ಆ ಆಧಾರದ ಮೇಲೆಯೇ ರಾವಣನನ್ನು ಚಿತ್ರಿಸಿದರೆ, ಮರುದಿನ
"ರಾವಣಾದಿಗಳ ಕೊಂದು ಕೊಡುವೆ ಎಂದು ಋಷಿಗಳಿಗೆ ಭಾಷೆ ಕೊಟ್ಟಿದ್ದಾನಲ್ಲ ಆ ರಾಮ ಅದಕ್ಕೆ ಸೀತಾಪಹಾರ ಮಾಡಿದೆ. ಈಗ ನೋಡುವ ರಾಮ ಏನು ಮಾಡುತ್ತಾನೆ"
ಎಂದು ಆ ವಿಷಯದ ಮೇಲೆಯೇ ವಾದ ಮಂಡನೆ ಮಾಡುತ್ತಿದ್ದರು. ಅದರ ಮರುದಿನ
"ನನಗೆ ಸೇರಿದ ಪಂಚವಟಿಯನ್ನು ಋಷಿಮುನಿಗೆ ದಾನ ಕೊಟ್ಟಿದ್ದಾನಲ್ಲಾ ಆ ರಾಮ, ಅವನನ್ನು ನನ್ನ ಸ್ವಕ್ಷೇತ್ರಕ್ಕೆ ಬರುವಂತೆ ಮಾಡಲಿಕ್ಕಾಗಿ ಸೀತಾಪಹಾರ ಮಾಡಿದೆ"
ಎಂದು ಆ ವಾದದ ಮೇಲೆ ರಾವಣನನ್ನು ಸಮರ್ಥಿಸುತ್ತಿದ್ದರು. ಹೀಗೆ ಪ್ರತಿ ಭಾರಿಯೂ ಪಾತ್ರ ಚಿತ್ರಣ ಭಿನ್ನವಾಗಿ ಪ್ರಸ್ತುತಪಡಿಸುತ್ತಿದ್ದ ಕಾರಣ ಶೇಣಿಯವರ ಅರ್ಥಗಾರಿಕೆಗೆ ಪ್ರೇಕ್ಷಕರು ಮುಗಿ ಬೀಳುತ್ತಿದ್ದರು. ಬಹುಷಃ ತ್ರೇತಾಯುಗದ ರಾವಣನು ಹೀಗೆ ಚಿಂತಿಸಿರಲಿಕ್ಕಿಲ್ಲ. ಆದರೆ ಶೇಣಿಯವರ ರಾವಣನ ಚಿಂತನೆ ಆ ರೀತಿಯಲ್ಲಿತ್ತು. ಇದೇ ರೀತಿ ವಾಲಿ, ಕೌರವ, ಮಾಗಧರ ಪಾತ್ರ ಚಿತ್ರಣವೂ ಇತ್ತು. ಶೇಣಿಯವರು ರಾವಣ, ವಾಲಿ, ಕೌರವ, ಮಾಗಧ ಮೊದಲಾದ ಪಾತ್ರವನ್ನು ನಿರ್ವಹಿಸಿ ಆ ಪಾತ್ರಗಳು ಉದಾತ್ತವಾಗಿ ಚಿತ್ರಣಗೊಂಡಾಗ, ಆ ಪಾತ್ರ ಮೇಲ್ಮೈ ಸಾಧಿಸಲ್ಪಟ್ಟಾಗ ಒಮ್ಮೆ ಪೇಜಾವರ ಶ್ರೀ ಯವರು
"ಇನ್ನು ಮುಂದೆ ಶೇಣಿಯವರಿಗೆ ಖಳ ಪಾತ್ರ ಕೊಡಬಾರದು. ಅವರಿಗೆ ನಾಯಕ ಪಾತ್ರವನ್ನೇ ಕೊಡಬೇಕು. ಇಲ್ಲದಿದ್ದಲ್ಲಿ ರಾವಣ ಕೌರವಾದ್ಯರು ಮಾಡಿದ್ದೇ ಸರಿಯೆಂದು ಭಾವಿಸುವ ಸಂಭವವಿದೆ"
ಎಂದು ಹೇಳಿದ್ದರು. ತದ ನಂತರ ಶೇಣಿಯವರಿಗೆ ನಾಯಕ ಪಾತ್ರವನ್ನೇ ಕೊಡುವ ಪರಿಪಾಠವಾಯಿತು. ಇಂದು ಯಾವನೇ ಕಲಾವಿದರು ಆಯಾಯ ಪಾತ್ರಕ್ಕೆ ಕೊಡುವ ಚಿತ್ರಣ ಒಂದು ಕಾಲದಲ್ಲಿ ಶೇಣಿಯವರು ಕೊಟ್ಟ ಬಳುವಳಿ ಎಂದರೂ ತಪ್ಪಲ್ಲ. ಇಂದಿನ ಯಕ್ಷಗಾನದ "ಸವ್ಯಸಾಚಿ" ಎನಿಸಿದ ಶ್ರೀ ಕೆ. ಗೋವಿಂದ ಭಟ್ಟರು ಶೇಣಿಯವರ ಬಗ್ಗೆ ಬರೆಯುತ್ತಾ
        "ಯಾವನೇ ಕಲಾವಿದ ಪಾತ್ರ ಚಿತ್ರಣದ ಬಗ್ಗೆ ಏನೇ ಹೇಳಿದರೂ ಅದು ಶೇಣಿಯವರ ಉಚ್ಛಿಷ್ಟವೇ ಹೊರತು ಬೇರೇನಲ್ಲ" ಎಂದು ಬರೆದಿರುವುದು ಉಲ್ಲೇಖನೀಯ.

O :-  ಎಂ. ಶಾಂತರಾಮ ಕುಡ್ವ, ಮೂಡಬಿದಿರೆ
        M.  Shantharama Kudva, Moodabidri

No comments:

Post a Comment