Thursday 2 July 2015

ಶೇಣಿ ವೈಭವ - ಭಾಗ ೫

ದಿ. ಮಲ್ಪೆ ರಾಮದಾಸ ಸಾಮಗರು ದಿ. ಶಂಕರ ನಾರಾಯಣ ಸಾಮಗರ ತಮ್ಮ. ಇವರು ಹರಿದಾಸರಾಗಿ ಪ್ರಸಿದ್ಧರಾಗಿ ಮುಂದೆ ಯಕ್ಷರಂಗ ಪ್ರವೇಶಿಸಿ ಪ್ರಖ್ಯಾತ ಅರ್ಥಧಾರಿ, ವೇಷಧಾರಿಯಾದದ್ದು ಯಕ್ಷಗಾನಕ್ಕೆ ಒದಗಿ ಬಂದ ಭಾಗ್ಯ.
ಖಾದಿ ಅಂಗಿ, ಕಚ್ಚೆಯ ಧೋತಿ, ಹೆಗಲಲ್ಲಿ ಒಂದು ಶಾಲು, ಜುಟ್ಟು ಕಟ್ಟಿದ ಕೇಶರಾಶಿ ಇವರ ಪೋಷಾಕು. ಸದಾ ಹಸನ್ಮುಖಿಯಾಗಿದ್ದು ಸರಳ, ವಿನಯವಂತಿಕೆಯ ಸ್ವಭಾವದವರು. ಆದರೆ ಮಹಾ ಆತ್ಮಾಭಿಮಾನಿ. ತಮ್ಮ ಗೌರವಕ್ಕೆ ಧಕ್ಕೆ ಬಂದರೆ ಖಂಡಿತಾ ಸಹಿಸುವವರಲ್ಲ. ತಮಗೆ ಕೊಡುವ ಮರ್ಯಾದೆ ಕಮ್ಮಿಯಾಯಿತೆಂದು ಕಂಡಲ್ಲಿ ಮೇಳ ಯಾ ಕೂಟದಿಂದಲೇ ನಿರ್ಗಮಿಸಲೂ ಹಿಂದೆ ಮುಂದೆ ನೋಡಲಾರರು. ದಿ. ಕಲ್ಲಾಡಿ ವಿಟ್ಠಲ ಶೆಟ್ಟರು ಇವರ ಘನತೆಗೆ ಚ್ಯುತಿ ಬಾರದಂತೆ ವ್ಯವಸ್ಥೆ ಹಾಗೂ ಇವರಿಗಾಗಿಯೇ ಒಬ್ಬ ಆಳಿನ ನೇಮಕ ಮಾಡಿದ್ದರು. ಕರ್ನಾಟಕ ಮೇಳದಲ್ಲೇ ಇವರು ಮೂವತ್ತು ವರ್ಷಗಳಿಗೂ ಅಧಿಕ ಕಾಲ ಸೇವೆ ಸಲ್ಲಿಸಿದರು.
ರಾ. ಸಾಮಗರು ರಾಮಾಯಣ, ಮಹಾಭಾರತ, ವೇದೋಪನಿಷತ್ತು, ಶಾಸ್ತ್ರ, ದಾಸ ಸಾಹಿತ್ಯದ ಮೇಲೆ ಅಪಾರ ಜ್ಞಾನ ಹೊಂದಿದ್ದರು. ಇವರ ಅರ್ಥಗಾರಿಕೆ ಆಕರ್ಷಕ. ವ್ಯಾಕರಣ ಒಲವು ಇದ್ದುದು ಸಾಮಗರ ಅರ್ಥದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ತುಳು ಪ್ರಸಂಗಗಳಲ್ಲಂತೂ ಸಾಮಗರು ಶುದ್ಧ ತುಳು ಭಾಷಾ ಸೊಗಡಿನಿಂದ ಪ್ರೇಕ್ಷಕರನ್ನು ರಂಜಿಸುತ್ತಿದ್ದರು. ಇವರು ತಮ್ಮ ಅರ್ಥದಲ್ಲಿ ಪ್ರೇಕ್ಷಕರನ್ನು "ಇನ್ವಾಲ್ವ್" ಮಾಡುವ ಶೈಲಿ ಇವರಿಗೆ ಸೀಮಿತ.
"ನಾನು ಇದನ್ನು ಮಾಡಬಹುದೋ ಮಾಡಬಾರದೋ"
"ಗಂಡ ಮೇಲೋ, ಹೆಂಡತಿ ಮೇಲೋ, ನನಗೆ ತಿಳಿಯದು"
ಮುಂತಾದವನ್ನು ಜಿಜ್ಞಾಸೆ ರೂಪದಲ್ಲಿ ಪ್ರೇಕ್ಷಕರನ್ನೂ ಕಥಾಭಾಗಕ್ಕೆ ತರುವುದು ಅವರ ಅರ್ಥಗಾರಿಕೆಯ ವಿಧಾನವಾಗಿತ್ತು. ಸರಸ, ಶೃಂಗಾರ ಸಂಭಾಷಣೆಯಲ್ಲಿ ಸಿದ್ಧ ಹಸ್ತರಾದ ಸಾಮಗರು ಕರುಣ ರಸ, ದುಃಖ ಸನ್ನಿವೇಶಗಳಲ್ಲಿ ತಾವೇ ಪಾತ್ರಗಳಲ್ಲಿ ತಲ್ಲೀನರಾಗಿ ಅಳುತ್ತಿದ್ದರಲ್ಲದೇ ಸಭಿಕರನ್ನೂ ಅಳಿಸುವ ರೀತಿಯಲ್ಲಿ ಅಭಿನಯಿಸುತ್ತಿದ್ದರು. ಸಹಕಲಾವಿದರಿಗೆ ಹೇಳಿಕೊಡುವ ವಿಶೇಷ ಗುಣ ಸಾಮಗರಲ್ಲಿತ್ತು.
"ಮಾತುಗಾರರು" ಎಂಬ ಪದದ ಪರ್ಯಾಯ ಪದವೇ "ಸಾಮಗರು". ಮೊದಲೆಲ್ಲಾ ಹೊಸಮೇಳಗಳಾದಾಗ
"ನಿಮ್ಮಲ್ಲಿ ಸ್ತ್ರೀ ಪಾತ್ರಕ್ಕೆ ಯಾರು?, ಪುಂಡುವೇಷಕ್ಕೆ ಯಾರು?” ಎಂದು ಕೇಳುವ ಹಾಗೆಯೇ
"ನಿಮ್ಮಲ್ಲಿ ಸಾಮಗರು ಯಾರು" ಎಂದು ಕೇಳುವ ವಾಡಿಕೆ. ಅಂದರೆ ನಿಮ್ಮಲ್ಲಿ “ಮಾತುಗಾರರು” ಯಾರು ಎಂದು ಇದರ ಅರ್ಥ.

ದೊಡ್ಡ ಸಾಮಗರು ಅರ್ಥಗಾರಿಕೆಯಿಂದ ನಿವೃತ್ತರಾದ ನಂತರ ಶೇಣಿಯವರಿಗೆ ಎದುರಾಳಿಯಾಗಿ ಬಂದವರು ರಾ.ಸಾಮಗ, ಕುಂಬ್ಳೆ, ತೆಕ್ಕಟ್ಟೆ, ಮೂಡಂಬೈಲು ಜೋಷಿ ಮುಂತಾದವರು. ರಾ.ಸಾಮಗರು-ಶೇಣಿ ಜೋಡಿಯಿಂದಾಗಿ ಅರ್ಥಗಾರಿಕೆ ವಿಸ್ತೃತರೂಪ ತಳೆಯಿತು. ಶೇಣಿ-ಸಾಮಗರ ಜೋಡಿ ನೂರಾರು ಕೂಟದಲ್ಲಿ ಎದಿರಾದರೂ ಶೇಣಿಯವರಿಗೆ ಸಾಮಗರೊಂದಿಗೆ ಹೊಂದಾಣಿಕೆಯಾಗದೇ ಹಲವಾರು ಕೂಟಗಳು ಅರ್ಧದಲ್ಲೇ ನಿಂತದ್ದಿದೆ. ಸಾಮಗರ ವ್ಯಾಕರಣ, ಜಿಜ್ಞಾಸೆಗಳು ಶೇಣಿಯವರಿಗೆ ಕೋಪ ಬರಿಸುತ್ತಿತ್ತು.
ಇಂಥಹ ಕೂಟಗಳಲ್ಲೊಂದು, ಮೂಡಬಿದಿರೆಯ ಯಕ್ಷಸಂಗಮದ "ಭೀಷ್ಮಾರ್ಜುನ" ಪ್ರಸಂಗದಲ್ಲಿ ಸಾಮಗರ ಭೀಷ್ಮನಿಗೆ, ಶ್ರೀಕೃಷ್ಣನಾಗಿ ಶೇಣಿಯವರು ಹೆಚ್ಚು ಮಾತಾಡಲು ಬಿಡಲಿಲ್ಲ ಎಂದು ಸಾಮಗರ ಅಭಿಮಾನಿಗಳಿಗೆ ಕೋಪ ಬರಿಸಿತ್ತು. ಇದಾಗಿ ಎರಡೇ ವಾರದಲ್ಲಿ "ಯಕ್ಷಲಹರಿ", ಕಿನ್ನಿಗೋಳಿಯವರ "ಶರಸೇತು ಬಂಧ" ದಲ್ಲಿ ಶೇಣಿಯವರ ಅರ್ಜುನನಿಗೆ ಸಾಮಗರು ಹನುಮಂತ. ಆರಂಭದಲ್ಲಿ ಚೆನ್ನಾಗಿ ಹೋದರೂ ನಂತರ ವಾದ, ಪ್ರತಿವಾದಗಳು ಬಿಸಿಯೇರತೊಡಗಿತು. ಉಭಯರ ಅಭಿಮಾನಿಗಳು ಈ ವಾದಕ್ಕೆ ಚಪ್ಪಾಳೆಯ ತುಪ್ಪವನ್ನೆರೆಯಿತು.
"ತರಿಸಿ ಐರಾವತವನು" ಪದ್ಯಕ್ಕೆ ಶೇಣಿಯವರು "ತಾಯಿಯಾದ ಕುಂತೀದೇವಿಯ ಗಜಗೌರಿ ವ್ರತಕ್ಕಾಗಿ ಸ್ವರ್ಗದಿಂದ ಐರಾವತ ತಂದ ಕಥೆ” ಹೇಳಿದಾಗ, ಸಾಮಗರು
"ಗಜಗೌರಿ ವ್ರತಕ್ಕೆ ಮಣ್ಣಿನ ಆನೆಯನ್ನು ಪೂಜಿಸುವುದೇ ಹೊರತು ನಿಜ ಆನೆ ತಂದರೆ ಅದು ವ್ರತವಾಗಲಾರದು”
ಎಂದರು. ಶೇಣಿಯವರು ಎಷ್ಟೇ ಆಧಾರ ನೀಡಿದರೂ ಸಾಮಗರು ಒಪ್ಪಲೇ ಇಲ್ಲ. ಶೇಣಿಯವರು, ಅರ್ಜುನ ಮಾತಾಡುವ ಧಾಟಿಯಲ್ಲೇ
"ಸಾಮಗರೇ, ಏನು ನಿಮ್ಮ ಉದ್ದೇಶ. ಪ್ರಸಂಗದಲ್ಲೇ ಇಲ್ಲವೇ "ತರಿಸಿ ಐರಾವತವನು"
ಎಂದಾಗಲೂ ಸಾಮಗರು,
"ಪದ್ಯದಲ್ಲಿ ಉಂಟು ಹೌದು. ಆದರೆ ಹನೂಮಂತನು ಇದನ್ನು ಒಪ್ಪಿದ್ದಾನೆಂದು ಪದ್ಯದಲ್ಲಿ ಇಲ್ಲವಲ್ಲ"  ಎಂದರು.
ಇಲ್ಲಿಗೆ ತಾಳಮದ್ದಳೆ ದ್ವಾಪರದಿಂದ ಕಲಿಯುಗಕ್ಕೆ ಇಳಿಯಿತು. ಅಷ್ಟರಲ್ಲಿ ಪ್ರೇಕ್ಷಕರು ಶೇಣಿ-ಸಾಮಗರ ಅಭಿಮಾನಿಗಳಾಗಿ ಇಬ್ಭಾಗವಾದರು. ಸಭೆಯಲ್ಲೇ ಗದ್ದಲ ಏರ್ಪಟ್ಟು ತಾಳಮದ್ದಳೆಯೇ ನಿಂತಿತು. ನಾನು ಮತ್ತು ಸದಾಶಿವ ರಾವ್ ವೇದಿಕೆಯ ಬಲಭಾಗದಲ್ಲಿದ್ದೆವು. ಸಂಘಟಕರಾದ ಶ್ರೀಧರ್ ಡಿ.ಎಸ್. ಎಡಬದಿಯಲ್ಲಿದ್ದರೆ ಶ್ರೀನಿವಾಸ್ ರಾವ್ ನಮ್ಮೊಂದಿಗಿದ್ದರು. ಪ್ರೇಕ್ಷಕರು ತಮ್ಮ ತಮ್ಮ ಅರ್ಥಧಾರಿಗಳ ಪರವಾಗಿ ವಾಗ್ಯುದ್ಧದಲ್ಲಿ ನಿರತರಾಗಿದ್ದರು. ನಾನು ಶ್ರೀನಿವಾಸ ರಾಯರಲ್ಲಿ "ನೀವೀಗ ಮಧ್ಯಪ್ರವೇಶಿಸದಿದ್ದರೆ ಕಷ್ಟ" ಎಂದೆ. ಕೊನೆಗೆ ಡಿ.ಎಸ್.ರವರು ಶ್ರೀನಿವಾಸರಾಯರಲ್ಲಿ ಚರ್ಚಿಸಿ, ಶ್ರೀನಿವಾಸರಾಯರು ಮಧ್ಯಪ್ರವೇಶಿಸಿ, ತಾಳಮದ್ದಳೆ ಮುಂದುವರಿದು ಅಲ್ಲಿಗೇ ಸುಣ್ಣಂಬಳರ 'ಕೃಷ್ಷ' ಪ್ರವೇಶವಾಯಿತು. ನಂತರ ಶೇಣಿಯವರು ಕೃಷ್ಣನನ್ನು ಉದ್ದೇಶಿಸಿಯೇ ಮಾತನಾಡಿ ಪ್ರಸಂಗ ಮುಗಿಸಿದರು.
ಈ ಸಂದರ್ಭದಲ್ಲಿ ನಾನು ಮತ್ತು ಸದಾಶಿವರಾವ್ ಪ್ರತ್ಯಕ್ಷ ಸಾಕ್ಷಿಗಳು.

O :-  ಎಂ. ಶಾಂತರಾಮ ಕುಡ್ವ, ಮೂಡಬಿದಿರೆ
         M.  Shantharama Kudva, Moodabidri

No comments:

Post a Comment