Friday 3 July 2015

ಕುಂಬ್ಳೆ ಸುಂದರ್ ರಾವ್

"ಕುಂಬ್ಳೆ" ಎಂಬ ಹೆಸರು ಯಕ್ಷಾಭಿಮಾನಿಗಳಲ್ಲಿ ಅಭಿಮಾನ ಮೂಡಿಸುವಂಥದು. ಪ್ರಖರ ಹಿಂದೂವಾದಿಯಾಗಿ, ಸಮಕಾಲೀನ ಅರ್ಥಧಾರಿಗಳಲ್ಲಿ ಅಗ್ರಗಣ್ಯರೆನಿಸಿದವರು. ಇವರ ಅರ್ಥ ಸರಳ, ಸುಂದರ, ಭಾವಪೂರ್ಣ, ಆಕರ್ಷಕ ಹಾಗೂ ಜನಮಾನಸದಲ್ಲಿ ಸದಾಕಾಲ ನೆನಪಲ್ಲುಳಿಯುವಂಥಹದು.  ಪ್ರಾಸಬದ್ಧವಾಗಿ ಮಾತಾಡುವ ಕಾರಣ "ಪ್ರಾಸದ ಕುಂಬ್ಳೆ"ಯವರು ಎಂದೇ ಇವರು ಪ್ರಸಿದ್ಧರು. ಯಾವುದೇ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಬಲ್ಲ ಇವರು, ಪ್ರೇಕ್ಷಕರನ್ನು ಹಿಡಿದಿಡಿಯುವ ನಿಷ್ಣಾತರು. ಉತ್ತಮ ಭಾಷಣಕಾರರಾಗಿ ರಾಜಕೀಯ ಕ್ಷೇತ್ರದಲ್ಲೂ ಮಿಂಚಿದ ಇವರು "ಯಕ್ಷಗಾನ ಕಲಾವಿದರೊಬ್ಬ ನೇರವಾಗಿ ಮತದಾರರಿಂದ ಆರಿಸಲ್ಪಟ್ಟ ಪ್ರಪ್ರಥಮ ಯಕ್ಷಗಾನ ಕಲಾವಿದ" ರೆಂಬ ನೆಗಳ್ತೆಗೆ ಪಾತ್ರರಾದ ‘ಏಕಮೇವ ಕಲಾವಿದ’ ಎಂಬುದು ಯಕ್ಷರಂಗಕ್ಕೇ ಅಭಿಮಾನದ ಸಂಗತಿ. ಭರತ, ಉತ್ತರ,  ಶ್ರೀಕೃಷ್ಣ, ಶ್ರೀರಾಮ, ಗೋವಿಂದ ದೀಕ್ಷಿತ, ಸುಧನ್ವ, ವಿಷ್ಣು , ಭೀಷ್ಮ, ಅಂಗದ,  ನಳ, ವಿಶ್ವಾಮಿತ್ರ ಮೊದಲಾದ ಪಾತ್ರಗಳು ಇವರಿಗೆ ಅಪಾರ ಹೆಸರು ತಂದುಕೊಟ್ಟಿವೆ.
ಕುಂಬ್ಳೆಯವರು ಧರ್ಮಸ್ತಳ ಮೇಳದಲ್ಲಿರುವಾಗಲೇ ಅವರಿಗೆ ಬಿ.ಜೆ.ಪಿ.ಯಿಂದ ವಿಧಾನಸಭೆಯ ಅಭ್ಯರ್ಥಿಯಾಗಿ ಟಿಕೆಟ್ ದೊರಕಿತು. ಕುಂಬ್ಳೆಯವರು, ಡಾ|| ವಿರೇಂದ್ರ ಹೆಗ್ಗಡೆಯವರಲ್ಲಿ ಹೋಗಿ ವಿಷಯ ತಿಳಿಸಿದಾಗ, ಹೆಗ್ಗಡೆಯವರು,
“ಹಾಗಾದರೆ ನೀವಿನ್ನು ಎಂ.ಎಲ್.ಎ.” ಎಂದಾಗ ಕುಂಬ್ಳೆಯವರು,
"ಖಾವಂದರೇ , ಗೆದ್ದರೆ ನಾನು ಎಂ.ಎಲ್.ಎ. ಸೋತರೇ ಮಾತ್ರ ತಮ್ಮಲ್ಲೇ "  ಎಂದರು.
ಇಲ್ಲೂ ಪ್ರಾಸ.

ತೆಕ್ಕಟ್ಟೆಯವರನ್ನು ಹೊರತುಪಡಿಸಿದರೆ, ಶೇಣಿಯವರೆದುರು ಹೆಚ್ಚು ಕಾಣಿಸಿಕೊಂಡವರು ಕುಂಬ್ಳೆಯವರು. ಶೇಣಿ ಕುಂಬ್ಳೆ ಜೋಡಿ ಅತ್ಯಂತ ಪ್ರಸಿದ್ಧ.

ಒಮ್ಮೆ ಟೌನ್ ಹಾಲ್ ನಲ್ಲಿ "ಅಂಗದ ಸಂಧಾನ" ಆಟ. ಕುಂಬ್ಳೆಯವರು ಅಂಗದನಾದರೆ, ಶೇಣಿಯವರ ಪ್ರಹಸ್ತ ವಾದ ಸ್ವಾರಸ್ಯವಾಗಿ ಸಾಗಿತ್ತು.  ಆಗ ಶೇಣಿಯವರು
"ನೀನು ಇಷ್ಟು ಬುಧ್ಧಿವಂತನಾಗಲು ನಮ್ಮ ಪ್ರಭು ರಾವಣೇಶ್ವರನೇ ಕಾರಣ. ಏಕೆಂದರೆ ಸಣ್ಣ ಮಗುವಿನ ತೊಟ್ಟಿಲಿಗೆ ಆನೆ, ಕುದುರೆಯ ಪ್ರತಿಮೆ ಕಟ್ಟುತ್ತಾರೆ. ಏಕೆಂದರೆ, ಆ ಪ್ರತಿಮೆ ನೋಡಿ ನೋಡಿ ಮುಂದೆ ಆ ಮಗು ಆನೆ, ಕುದುರೆ ಏರಲಿ ಎಂಬ ಉದ್ದೇಶಕ್ಕಾಗಿ. ಆದರೆ ನಿನ್ನ ತೊಟ್ಟಿಲಿಗೆ ನಮ್ಮ ಪ್ರಭು ರಾವಣನನ್ನು ಕಟ್ಟಿದ ಕಾರಣ ನೀನು ರಾವಣನಂತೆ ಇಷ್ಟು ಬುಧ್ಧಿವಂತನಾದದ್ದು"  ಎಂದರು.
ಆಗ ಕುಂಬ್ಳೆಯವರು,
"ಅಯ್ಯಾ, ಪ್ರಹಸ್ತಾ, ನೀನೇ ಹೇಳಿದಂತೆ ಆನೆ, ಕುದುರೆಯನ್ನು ನೋಡಿ ಆ ಮಗು ಆನೆ, ಕುದುರೆ ಏರುವ ಸಾಹಸಿಯಾಗುತ್ತಾನಲ್ಲವೇ, ನಾನು ರಾವಣನನ್ನೇ ನೋಡಿ ಬೆಳೆದವನಾದ ಕಾರಣ, ನಾನೀಗ ಆ ರಾವಣನ ಮೇಲೆ ಏರುತ್ತೇನೆ "  ಎಂದರು.

"ರಾವಣ ಮೋಕ್ಷ" ಪ್ರಸಂಗ. ಶೇಣಿಯವರ ರಾವಣ, ಕುಂಬ್ಳೆಯವರ ಶ್ರೀರಾಮ. ಶೇಣಿಯವರ ರಾವಣ ಅವರ "ಮಾಸ್ಟರ್ ಪೀಸ್" ಗಳಲ್ಲೊಂದು. ಕುಂಬ್ಳೆಯವರು,
"ಪರನಾರಿ ಚೋರಾ" ಎಂದಾಗ ಶೇಣಿಯವರು,
"ರಾಮಾ, ಸೀತೆಯನ್ನು ನಿನ್ನಲ್ಲಿ ಹೋರಾಡಿಯೇ ತರಬಹುದಿತ್ತು. ಆದರೆ ಕದ್ದು ತಂದದ್ದು ಏಕೆ ಗೊತ್ತೇ? ನಿನ್ನನ್ನು ನನ್ನ ರಾಷ್ಟ್ರದಲ್ಲೇ ಕೊಲ್ಲಬೇಕೆಂದು"   ಎಂದರು.
ಆಗ ಕುಂಬ್ಳೆಯವರು,
"ದಶಕಂಠಾ, ನಾನೂ ಹಾಗೆಯೇ. ನಿನ್ನನ್ನು ಕೊಲ್ಲಬೇಕೆಂದೇ ನಾನೂ ದಕ್ಷಿಣಕ್ಕೆ ಬಂದದ್ದು. ಇಲ್ಲದಿದ್ದಲ್ಲಿ ಉತ್ತರದಲ್ಲಿ ಕಾಡು ಇರಲಿಲ್ಲವೇ?"  ಎಂದರು.

ಕುಂಬ್ಳೆಯವರ ಕೆಲ "ಪ್ರಾಸಗಳು "

"ಶರಸೇತು ಬಂಧನ"ದಲ್ಲಿ ವೃದ್ಧ ವಿಪ್ರನಾಗಿ,
            "ಇಲ್ಲಿ ನಾನೊಬ್ಬ ಹಾರುವ (ಬ್ರಾಹ್ಮಣ)
            ಅಲ್ಲಿ ಒಬ್ಬ ಮರದಿಂದ ಮರಕ್ಕೆ ಹಾರುವ (ಹನೂಮಂತ)
            ಓ ಅಲ್ಲಿ ಒಬ್ಬ ಬೆಂಕಿಗೆ ಹಾರುವ (ಅರ್ಜುನ)”

ಗೋವಿಂದ ದೀಕ್ಷಿತರಾಗಿ “ಚಂಡಾಲ ತರುಣಿ”ಯಲ್ಲಿ
            "ಯಾರು ನಿನ್ನ ತಂದೆ
            ಏಕೆ ಇಲ್ಲಿ ನಿಂದೆ
            ಹೇಳು ನನ್ನ ಮುಂದೆ
            ನಾಚಿಕೆ ಪಡಬೇಡ ಹಿಂದೆ"

"ಕರ್ಣ ಬೇಧನ"ದ ಕರ್ಣನಾಗಿ ಕೃಷ್ಣನಲ್ಲಿ
            "ಕೃಷ್ಣಾ, ನೀನು ಸಿಂಧು
            ನಾನೊಬ್ಬ ಬಿಂದು
            ನಾವಿಬ್ಬರೂ ಹೇಗೆ ಒಂದು, ಹೇಗೆ ಒಂದು"

O :-  ಎಂ. ಶಾಂತರಾಮ ಕುಡ್ವ, ಮೂಡಬಿದಿರೆ
                  M.  Shantharama Kudva, Moodabidri

No comments:

Post a Comment