Thursday 2 July 2015

ಬಲಿಪ ಶೈಲಿ

ದೊಡ್ಡ ಬಲಿಪ ಭಾಗವತರು ಈಗಿನ ಬಲಿಪ ಭಾಗವತರ ಅಜ್ಜ. ಇವರು ಇನ್ನೂರಕ್ಕೂ ಮಿಕ್ಕಿ ಪ್ರಸಂಗದ ಪದ್ಯ ಕಂಠಪಾಠ ಹೊಂದಿದ ಅಪ್ರತಿಮ ಭಾಗವತರು ಹಾಗೂ ಕಲಾವಿದರು. ಆಶು ಕವಿಗಳಾದ ಇವರು ರಂಗಸ್ಥಳದಲ್ಲೇ ಪದ್ಯ ರಚಿಸುತ್ತಿದ್ದರು. "ಬಲಿಪ ಶೈಲಿ" ಎಂಬುದು ಇವರದೇ ಕೊಡುಗೆ.
ಅವರ ಭಾಗವತಿಕೆಯಲ್ಲಿ ನಡೆದ ಒಂದು ಸ್ವಾರಸ್ಯಕರ ಘಟನೆ.
ಮೂಡಬಿದಿರೆಯಲ್ಲಿ "ಸೀತಾಪಹಾರ" ತಾಳಮದ್ದಳೆ. ಬಲಿಪರ ಭಾಗವತಿಕೆ. ಚಿನ್ನದ ಜಿಂಕೆ ತರುವ ಸನ್ನಿವೇಶದ ಲಕ್ಷ್ಮಣನ "ಅಗ್ರಜ ವೀರಾ ಸ್ವಲ್ಪ ಕೆಲಸಕೆ" ಪದ್ಯಕ್ಕೆ ರಾಮ ಲಕ್ಷ್ಮಣ ಪಾತ್ರಧಾರಿಗಳಿಗೆ  ಜಿಂಕೆ ಯಾರು ತರುವುದು ಎಂಬ ಬಗ್ಗೆ ಭಾರೀ ಚರ್ಚೆಯಾಯಿತು. ಇಬ್ಬರೂ ವಾಗ್ಮಿಗಳೇ. ಶಾಸ್ತ್ರ, ಪುರಾಣ, ವೇದಗಳೆಲ್ಲಾ ಅನಾವರಣಗೊಂಡಿತು. ಲಕ್ಷ್ಮಣನ ವಾದದ ಎದುರು ಕೊನೆಗೆ ರಾಮನೇ ಸೋಲಬೇಕಾಯಿತು.

ಮುಂದಿನ ಪದ್ಯ. "ಆಗದಾಗದು".
ಆದರೆ ಬಲಿಪರು ಹಾಡಲಿಲ್ಲ. ಸಂಘಟಕರು ಏನೆಂದು ಕೇಳಿದಾಗ, ಬಲಿಪರು ಅಷ್ಟರವರೆಗೆ ಕಂಠಪಾಠದಲ್ಲೇ ಹೇಳುತ್ತಿದ್ದವರು
"ನನಗೆ ಪದ್ಯ ಪುಸ್ತಕ ಬೇಕು"
ಎಂದರು. ಪುಸ್ತಕ ತರುವವರೆಗೆ ತಾಳಮದ್ದಳೆ ನಿಂತಿತು. ಸಂಘಟಕರು ಪುಸ್ತಕ ಒದಗಿಸಿದರು. ಬಲಿಪರು ಅದನ್ನು ನೋಡಿ "ಇದು ಅಲ್ಲ" ಎಂದು ಹಿಂದಿರುಗಿಸಿದರು.
ಸಂಘಟಕರು ವಾಸು ಸಾಮಗ ಎಂಬ ಮೂಡಬಿದಿರೆಯ ಪ್ರಸಿದ್ಧ ಕಲಾವಿದರ ಮನೆಗೆ ಹೋಗಿ ಬೇರೊಂದು ಪುಸ್ತಕ ತಂದರು. ಬಲಿಪರು "ಇದೂ ಅಲ್ಲ" ಎಂದರು. ಆಗ ಸಭೆಯಲ್ಲಿ ದ.ಕ. ಜಿಲ್ಲಾ ಕಲೆಕ್ಟರ್ ರವರು ಪ್ರೇಕ್ಷಕರಾಗಿ ಬಂದಿದ್ದವರು ಎದ್ದು ನಿಂತು,
"ಏನು ಭಾಗವತರೇ, ನೀವು ಈ ರೀತಿ ಮಾಡುವ ಉದ್ದೇಶವಾದರೂ ಏನು? ಪ್ರಸಂಗ ಪದ್ಯ ಕಂಠಪಾಠ ಹೊಂದಿರುವ, ಆಶು ಕವಿಗಳಾದ ನಿಮಗೆ ಪುಸ್ತಕದ ಅಗತ್ಯವಾದರೂ ಏನು?"
ಎಂದು ಪ್ರಶ್ನಿಸಿದರು. ಆಗ ಬಲಿಪರು
"ಮಹಾಜನರು ಕ್ಷಮಿಸಬೇಕು. "ಸೀತಾಪಹಾರ" ದ ಪದ್ಯ ನನಗೆ ಕಂಠಪಾಠವಿದೆ. ಆದರೆ, ಈಗ ಕಥೆ ಎಲ್ಲಿಗೆ ಮುಟ್ಟಿದೆ ಎಂದರೆ, ಲಕ್ಷ್ಮಣನೇ ಜಿಂಕೆ ತರುವಲ್ಲಿ. ಆ ಕಥೆ ನನಗೆ ಗೊತ್ತಿಲ್ಲ. ಆ ಪುಸ್ತಕ ಸಿಕ್ಕಿದರೆ ಪದ್ಯ ಹೇಳುತ್ತೇನೆ"
ಅಂದರಂತೆ. ಕೊನೆಗೆ ಲಕ್ಷ್ಮಣ ಪಾತ್ರಧಾರಿ ಸಭೆಗೆ ಕ್ಷಮೆ ಯಾಚಿಸಿದ ನಂತರ ತಾಳಮದ್ದಳೆ ಮುಂದುವರಿಯಿತು.

(ಆಧಾರ : ಇಪ್ಪತ್ತು ವರ್ಷಗಳ ಹಿಂದೆ ಉದಯವಾಣಿಯಲ್ಲಿ ಬಂದ ಲೇಖನ. ಲೇಖಕರ ಹೆಸರು ಮರೆತಿದೆ)

O :-  ಎಂ. ಶಾಂತರಾಮ ಕುಡ್ವ, ಮೂಡಬಿದಿರೆ
        M.  Shantharama Kudva, Moodabidri

No comments:

Post a Comment