Thursday 2 July 2015

ಕಡತೋಕ ಮಂಜುನಾಥ ಭಾಗವತರು

"ಕಡತೋಕ ಭಾಗವತರು ಯಕ್ಷರಂಗ ಕಂಡ ಶ್ರೇಷ್ಠ ಭಾಗವತರಲ್ಲಿ ಓರ್ವರು. ಕಂಚಿನ ಕಂಠ, ಯೋಗ್ಯ ನಿರ್ದೇಶನ, ಪ್ರಸಂಗಗಳ ಮೇಲಿನ ಹಿಡಿತ, ಕಲಾವಿದರ ಮೇಲಿನ ಹತೋಟಿ, ವಸ್ತುನಿಷ್ಟ ನೇರ ನುಡಿ ಇವೆಲ್ಲ ಕಡತೋಕರ ಬಗ್ಗೆ ಉಲ್ಲೇಖಿಸಲೇಬೇಕಾದ ಅಂಶಗಳು.ಧರ್ಮಸ್ತಳ ಮೇಳದಲ್ಲಿಯೇ ದೀರ್ಘ ಸೇವೆ ಸಲ್ಲಿಸಿದ ಮಹಾನ್ ಭಾಗವತರು.
ನೇರ ನುಡಿಯ, ಎಷ್ಟೇ ದೊಡ್ಡ ಕಲಾವಿದರನ್ನೂ ನಿಯಂತ್ರಿಸುವ ಸಾಮರ್ಥ್ಯ ಹೊಂದಿದ ಇವರು ಹಲವಾರು ಕಲಾವಿದರನ್ನು ಯಕ್ಷರಂಗಕ್ಕೆ ತಯಾರಿಗೊಳಿಸಿದ್ದಾರೆ. ಪದ್ಯಗಳನ್ನು ಪದಛ್ಛೇದಗೊಳಿಸಿ, ವ್ಯಾಕರಣಕ್ಕೆ ಭಂಗ ಬಾರದಂತೆ ಹಾಡಬಲ್ಲ, ಸಮಯಪ್ರಜ್ಞೆ ಉಳ್ಳ ಉತ್ತಮ ಭಾಗವತರು. ಕಲಾವಿದರನ್ನು ರಂಗಸ್ಥಳದಲ್ಲೇ ತಿದ್ದುವ ಇವರು, ಕಲಾವಿದರ ಸಾಮರ್ಥ್ಯ ಅರಿತು ಅವರನ್ನು ಕುಣಿಸುವ ಶೈಲಿ ಅಸದೃಶ. ಉಬರಡ್ಕ, ವಸಂತ ಗೌಡ, ಗಂಗಾಧರ, ವೇಣೂರು ಅಶೋಕ ಆಚಾರ್ಯ ಮೊದಲಾದ ಕಲಾವಿದರು ಇವರ ಗರಡಿಯಲ್ಲೇ ಪಳಗಿದವರು.

ಒಮ್ಮೆ "ಚಕ್ರೇಶ್ವರ ಪರೀಕ್ಷಿತ" ಪ್ರಸಂಗ. ಜನಮೇಜಯನಾಗಿ ದಿ. ಪುತ್ತೂರು ನಾರಾಯಣ ಹೆಗ್ಡೆಯವರ ಪ್ರವೇಶವಾದಾಗ ಮುಂಜಾನೆ ಐದು ಗಂಟೆ. ಹೆಗ್ಡೆಯವರು ಸ್ವಲ್ಪ ದೀರ್ಘವಾಗಿ ಮಾತಾಡಿದರು. ಕೂಡಲೇ ಕಡತೋಕರು
"ಹಾಂ, ಸಾಕು. ತಮ್ಮಂದಿರನ್ನು ಕರೆಯಿರಿ" ಎಂದು ಕಥೆಗೇ ತಂದರು.

ಒಮ್ಮೆ ಕುಂಬ್ಳೆಯವರು ಸ್ವಲ್ಪ ದೀರ್ಘವಾಗಿ ಮಾತಾಡಿದರಂದು ಕಾಣುತ್ತದೆ. ಆಗ ಕಡತೋಕರು, ರಂಗಸ್ಥಳದಲ್ಲೇ,
"ಬೇಗ ಮುಗಿಸಿ, ಇನ್ನೂ ಹಲವಾರು ವೇಷಗಳು ಬರಲಿಕ್ಕಿದೆ" ಎಂದರು.

ಸಿಗರೇಟ್ ಪ್ರಿಯರಾದ ಕಡತೋಕರು ಶೀಘ್ರ ಕೋಪಿಗಳಾದರೂ, ದೀರ್ಘ ದ್ವೇಷಿಗಳಲ್ಲ. ಚಿಕ್ಕ ಕಲಾವಿದರನ್ನೂ ಗೌರವಿಸುವ ಅಪೂರ್ವ ಗುಣ ಹೊಂದಿದ್ದು, ರಂಗಸ್ಥಳದಲ್ಲಿ ಕಠಿಣತ್ವ ತೋರುತ್ತಿದ್ದರೂ ಚೌಕಿಯಲ್ಲಿ, ಸಹಕಲಾವಿದರಲ್ಲಿ ಹಾಸ್ಯಮಿಶ್ರಿತ ಶೈಲಿಯಲ್ಲೇ ಮಾತಾಡುತ್ತಿದ್ದರು.

"ಮಹಾರಥಿ ಕರ್ಣ, ಭರತ ಬಾಹುಬಲಿ, ಧರ್ಮಸ್ತಳ ಕ್ಷೇತ್ರ ಮಾಹಾತ್ಮ್ಯ, ಕಾಯಕಲ್ಪ, ವಂಶವಾಹಿನಿ, ಅಮರವಾಹಿನಿ" ಮೊದಲಾದ ಪ್ರಸಂಗಗಳಿಗೆ ಯೋಗ್ಯ ನಿರ್ದೇಶನ ನೀಡಿ ಯಶಸ್ವಿಯಾಗಲು ಕಾರಣೀಭೂತರು, ಕಡತೋಕರು.

O :-  ಎಂ. ಶಾಂತರಾಮ ಕುಡ್ವ, ಮೂಡಬಿದಿರೆ
         M.  Shantharama Kudva, Moodabidri

No comments:

Post a Comment