Thursday 2 July 2015

ಕವಿ ಭೂಷಣ ದಿ. ವೆಂಕಪ್ಪ ಶೆಟ್ಟರು ಆ ಕಾಲದಲ್ಲಿ ಪ್ರಖರ ಅರ್ಥಧಾರಿಗಳು. ಪ್ರಕಾಂಡ ಪಂಡಿತರಾದ ಅವರ ವಾದ, ಮಂಡನೆ, ಖಂಡನೆಗಳು ಅನನ್ಯ, ಅಸದ್ರಶ. ೧೯೯೦-೨೦೦೦ ದ ಕಾಲದಲ್ಲಿ ಶೇಣಿಯವರು ಹೇಗೆ ಮೆರೆಯುತ್ತಿದ್ದರೋ, ಆ ಕಾಲದಲ್ಲಿ ಶೆಟ್ಟರು ವಿಜೃಂಭಿಸುತ್ತಿದ್ದರು. ಅವರ ಎದುರು ಅರ್ಥ ಹೇಳಲು ಎಲ್ಲರೂ ಅಂಜುತ್ತಿದ್ದರು. ಅವರ ಅರ್ಥಗಾರಿಕೆ, ವಾದ, ನಿರೂಪಣೆ ಎಲ್ಲವೂ ತೀಕ್ಷ್ಣ.

            ಅವರ ವಾದದ ಒಂದು ಶೈಲಿ.
ಕೃಷ್ಣ ಸಂಧಾನದ ಭೀಮನಾಗಿ ದ್ರೌಪದಿಯೊಂದಿಗೆ ಸಂಭಾಷಣೆಯ ಸಂದರ್ಭ.
ದ್ರೌಪದಿಯ "ಆರು ಸುಪ್ರೀತರು" ಪದ್ಯದ "ಆರು" ಪದವನ್ನು ಹಿಡಿದು ಶೆಟ್ಟರು
"ನೀನೇ ಹೇಳಿದೆಯಲ್ಲ, ಆರು ಎಂದು. ನೀನು ನನ್ನಲ್ಲಿ  ಯುದ್ಧದ ವಿಷಯ ಮಾತಾಡಬೇಡ. ಆ ಆರನೆಯವನ ಬಳಿ ಈ ವಿಷಯ ಪ್ರಸ್ತಾಪ ಮಾಡು"
ಎಂದು ಗದುಗಿನ ಭಾರತದಲ್ಲಿ ಬರುವ ಜಂಬೂಫಲದ ಪ್ರಕರಣ ತೆಗೆಯುತ್ತಿದ್ದರು. ಎದುರಾಳಿ ಈ ವಾದಕ್ಕೆ ನಿರುತ್ತರನಾಗುತ್ತಿದ್ದ. ಅದಕ್ಕಾಗಿ ಸುಮ್ಮಗೆ ಏಕೆ ಸಿಕ್ಕಿ ಬೀಳಬೇಕೆಂಬ ಭಾವನೆಯಿಂದ ಎಲ್ಲರೂ ಅವರ ಎದುರು ಅರ್ಥ ಹೇಳಲು ಹಿಂಜರಿಯುತ್ತಿದ್ದರು.
ಒಮ್ಮೆ ಶೇಣಿಯವರಿಗೇ ದ್ರೌಪದಿಯ ಪಾತ್ರ. ಶೆಟ್ಟರ ಅದೇ ವಾದ. ಶೇಣಿಯವರು ಹೆದರಲಿಲ್ಲ (ಇದು ಅವರ ಪ್ರಾರಂಭದ ಕಾಲ) ಕೂಡಲೇ
"ಪತಿದೇವಾ, ಆರು ಅಲ್ಲ ಇನ್ನಾರು (ಇನ್ನೂ ಆರು ಎಂಬ ದ್ವಂದ್ವಾರ್ಥ) ನಿಮ್ಮಂತೆ ಆದಾರೇ"
ಎಂದು ಸೈಂಧವ, ಕಕ್ಕ ಪ್ರಕರಣ, ಅರಗಿನ ಮನೆಯಿಂದ ರಕ್ಷಿಸಿದ್ದು ಎಲ್ಲಾ ವಿವರಿಸತೊಡಗಿದರು. ಶೆಟ್ಟರಿಗೂ ಸಂತಸವಾಗಿ
"ಶೆಟ್ಟರು ಉಢಾಪೆ ಮಾತಾಡುತ್ತಾರೆ. ಇಂಥಹ ಅರ್ಥಧಾರಿ ಸಿಕ್ಕಿದರೆ ನಾನೇಕೆ ಉಢಾಪೆ ಮಾತಾಡುತ್ತೇನೆ" ಎಂದು ಮನತುಂಬಿ ನುಡಿದರಂತೆ.
(ಈ ಘಟನೆಯನ್ನು ಶೇಣಿಯವರು "ಯಕ್ಷಗಾನ ಮತ್ತು ನಾನು" ಕೃತಿಯಲ್ಲಿ ಉಲ್ಲೇಖಿಸಿದ್ದರೂ ಅದನ್ನು ತಾನು ಹೇಳಿದ್ದೆಂದು ಬರೆದಿಲ್ಲ. ನನ್ನಲ್ಲಿ ಖಾಸಗಿಯಾಗಿ ಈ ಉತ್ತರ ತಾನೇ ಕೊಟ್ಟದ್ದೆಂದು ಹೇಳಿದ್ದರು.)

ಈ ಘಟನೆ ಬರೆಯುವಾಗ ಇಂಥದೇ ಘಟನೆಯೊಂದು ಅಡ್ಯಾರ್ ಎಂಬಲ್ಲಿ ಶೇಣಿಯವರ ಎದುರಲ್ಲೇ ಘಟಿಸಿದ್ದು ಕಾಕತಾಳೀಯ.
ಇದೇ “ಕೃಷ್ಣ ಸಂಧಾನ" ಪ್ರಸಂಗ. ಶೇಣಿಯವರ ಭೀಮ. ಅಂದು ದ್ರೌಪದಿ ಮಾಡಬೇಕಾದ ಕಲಾವಿದ ಬಂದಿರಲಿಲ್ಲ, ಶೇಣಿಯವರು ಎದುರು ಎಂದು ತಪ್ಪಿಸಿದ್ದಿರಬೇಕು. ಕೊನೆಗೆ ಯಾರಲ್ಲಾದರೂ ಮಾಡಿಸುವ ಎಂದು ಆಲೋಚಿಸುವಾಗ ಪ್ರೇಕ್ಷಕರಾಗಿ ಬಂದಿದ್ದ ಸುಂಕದಕಟ್ಟೆ ಮೇಳದ ಪುಂಡು ವೇಷಧಾರಿ ಕುಂಬ್ಳೆ ಚಂದ್ರಶೇಖರ ಎಂಬವರು ಸಂಘಟಕರ ಕಣ್ಣಿಗೆ ಬಿದ್ದರು. ಸರಿ, ಅವರನ್ನು ಪುಸಲಾಯಿಸಿ ದ್ರೌಪದಿ ಮಾಡಲು ಒಪ್ಪಿಸಿದರು. ಹೆದರಿಯೇ ಚಂದ್ರಶೇಖರ ವೇದಿಕೆ ಏರಿದರು. ಪ್ರೇಕ್ಷಕರಿಗೆಲ್ಲಾ ಆಶ್ಚರ್ಯ. ಈ ಬಡಪಾಯಿಗೆ ಈಗ ಕಾದಿದೆ ಗ್ರಹಚಾರ ಎಂಬ ಅನಿಸಿಕೆ. ಕೆಲವೇ ಕ್ಷಣದಲ್ಲಿ ಶೇಣಿಯವರ ಪ್ರಶ್ನೆ ಬಂದೇಬಿಟ್ಟಿತು.
"ದ್ರೌಪದೀ, ನಿನ್ನಲ್ಲಿ ಒಂದು ಪ್ರಶ್ನೆ"
ಎನ್ನುವಷ್ಟರಲ್ಲಿ ಚಂದ್ರಶೇಖರರು
"ಪತಿದೇವಾ, ಒಂದಲ್ಲಾ ನೂರು ಪ್ರಶ್ನೆ ಕೇಳಿ"
ಎಂದಾಗ ಇಡೀ ಸಭೆಗೆ ಶಾಕ್. ಮುಂದುವರಿಸಿ
"ಪತಿದೇವಾ, ಉತ್ತರ ಮಾತ್ರ ನಿರೀಕ್ಷಿಸಬೇಡಿ"
ಎಂದಾಗ ಶೇಣಿ ಸಹಿತ ಇಡೀ ಸಭೆಯೇ ಮೂಕವಿಸ್ಮಿತವಾಯಿತು.
(ನೋಡಿದ ಪ್ರೇಕ್ಷಕರೊಬ್ಬರು ಹೇಳಿದ ಘಟನೆ ಇದು.)

ಶೇಣಿಯವರು ಹರಿದಾಸರಾಗಲು ಮುಖ್ಯ ಕಾರಣವೇ ದಿ. ಶಂಕರ ನಾರಾಯಣ ಸಾಮಗರು. ಸಾಮಗರೊಮ್ಮೆ ಹರಿಕಥೆಗೆ ಒಪ್ಪಿ ಅನಾರೋಗ್ಯದಿಂದ ಬರಲಾಗದೇ ಅನಿವಾರ್ಯವಾಗಿ ಶೇಣಿಯವರು ಹರಿಕಥೆ ಮಾಡಿ ಹರಿದಾಸರಾದರು. ಹಾಗೆಯೇ ಮುಂದೆ ಕೂಡ್ಲು ಮೇಳದಲ್ಲಿ ಸಾಮಗರಿಗೆ ಸಮರ್ಥ ಅರ್ಥಧಾರಿ ಬೇಕೆಂದಾಗ ಕಲ್ಲಡ್ಕದಲ್ಲಿ ಜರಗಿದ "ಕೃಷ್ಣ ಸಂಧಾನ" ದಲ್ಲಿ ದೊಡ್ಡ ಸಾಮಗರ ಕೌರವನಿಗೆ ಶೇಣಿಯವರು ಕೃಷ್ಣನಾಗಿ ಪ್ರಪ್ರಥಮವಾಗಿ ವೇಷಧಾರಿಗಳಾದರು. ಮುಂದೆ ಕುರಿಯ ವಿಠ್ಠಲ ಶಾಸ್ತ್ರಿಗಳಿಂದ ಶೇಣಿಯವರು ಯಕ್ಷಗಾನದ ನಾಟ್ಯಾಭ್ಯಾಸ ಮಾಡಿದರು. ಹೀಗೆ "ಶೇಣಿ - ಸಾಮಗ" ಜೋಡಿ ರೂಪುಗೊಂಡಿತು.

            ಶೇಣಿ-ಸಾಮಗ
ಶೇಣಿಯವರಿಗೆ ಶಂ.ನಾ.ಸಾಮಗ ಮೇಲೆ ಅಪಾರ ಗೌರವ, ಅಭಿಮಾನ.
"ಕರ್ಣಾರ್ಜುನ ಕಾಳಗ” ದ ಪ್ರಸಂಗದಲ್ಲಿ ಶೇಣಿಯವರ ಕರ್ಣ ಮಾಮೂಲು. ಬೇರಾರದೇ ಶಲ್ಯ ಆದರೆ ಶೇಣಿಯವರು ಶಲ್ಯನನ್ನು ಸಂಭೋದಿಸುವುದು "ಏನು ಶಲ್ಯ ನೀನು" ಎಂಬುದಾಗಿ. (ಕರ್ಣ ಕೌರವ ಸೇನೆಯ ಸರ್ವ ಸೇನಾಧಿಪತಿ ಎಂಬ ನೆಲೆಯಲ್ಲಿ). ಆದರೆ ಸಾಮಗರು ಶಲ್ಯ ಪಾತ್ರ ಮಾಡಿದರೆ ಮಾತ್ರ "ಏನು ಶಲ್ಯ ಭೂಪತಿಗಳೇ" ಎಂದು ಸಂಭೋದಿಸುತ್ತಿದ್ದರು. ಸಾಮಗರ ಮೇಲೆ ಅಷ್ಟು ಗೌರವ.
"ಶೇಣಿ ಸಾಮಗ" ಜೋಡಿ ಆ ಕಾಲದಲ್ಲಿ ಭಾರಿ ಜನಪ್ರಿಯವಾಗಿತ್ತು.
ಒಮ್ಮೆ ಮೂಡಬಿದಿರೆಯಲ್ಲಿ "ಕೃಷ್ಣ ಸಂಧಾನ" ತಾಳಮದ್ದಳೆ.  ಶೇಣಿಯವರ ಕೌರವನಿಗೆ ಶಂ.ನಾ.ಸಾಮಗರ ಕೃಷ್ಣ. ಶೇಣಿಯವರು ಸಾಮಗರಲ್ಲಿ
“ನಿನ್ನ ೧೬೦೦೮ ಮಡದಿಯರ ಹೆಸರೇನು?”
ಎಂದು ವಿನೋದಕ್ಕಾಗಿ ಕೇಳಿದರು. ಸಭೆಯಿಂದ ಕರತಾಡನವಾಯಿತು. ಕೂಡಲೇ ಸಾಮಗರು
"ನಿನ್ನ ೯೯ ಮಂದಿ ತಮ್ಮಂದಿರ ಹೆಸರು ಹೇಳು ನೋಡುವಾ"
ಎಂದರು. ಕೂಡಲೇ ಸಾಮಗರು
“ನಾನು ಹೇಳುತ್ತೇನೆ, ದುಶ್ಶಾಸನ ಹಾಗೂ ಉಳಿದ ಎಲ್ಲಾ ಗುಣಗಳಿಗೆ ಆರಂಭದಲ್ಲಿ "ದುರ್" ಎಂದು ಸೇರಿಸಿದರೆ ನಿನ್ನ ತಮ್ಮಂದಿರ ಹೆಸರಾಗುತ್ತದೆ. ಇನ್ನು ನನ್ನ ೧೬೦೦೮ ಹೆಂಡತಿಯರ ಹೆಸರು ಹೇಳುತ್ತೇನೆ ಎಂದು ಹೇಳಿ ರುಕ್ಮಿಣಿ, ಸತ್ಯಭಾಮೆಯ ಸಹಿತ ಅಷ್ಟಮಾಂಗನೆಯರ ಹೆಸರು ಹೇಳಿ, ಗಿರಿಜಾ ಎಂಬವರು ೮೮೯, ವಾರಿಜ ಎಂಬವರು ೧೨೫೬, ನೀರಜಾ ಎಂಬವರು ೩೬೭೪ ಮಂದಿ, ವಾಣೀ ಎಂಬವರು ೪೫೮೯. ಈಗ ಒಟ್ಟು ಎಷ್ಟಾಯಿತು?” ಎಂದು ಕೇಳಿದರಂತೆ.

O :-  ಎಂ. ಶಾಂತರಾಮ ಕುಡ್ವ, ಮೂಡಬಿದಿರೆ
         M.  Shantharama Kudva, Moodabidri

No comments:

Post a Comment