Thursday 2 July 2015

ಮಾಸ್ಟ್ರುಮಾಮು ತೆಕ್ಕಟ್ಟೆಯವರು

ಶ್ರೀ ಗಿರಿಧರ ನಾಯಕರ ಅಪೇಕ್ಷೆಯಂತೆ ದಿ. ತೆಕ್ಕಟ್ಟೆ ಆನಂದ ಮಾಸ್ತರರ ಬಗ್ಗೆ
ನನ್ನ ತಿಳಿವಿಗೆ ಬಂದಂತೆ.
ದಿ. ತೆಕ್ಕಟ್ಟೆಯವರು ಪ್ರಕಾಂಡ ಪಂಡಿತ, ಉದ್ಧಾಮ ವಿದ್ವಾಂಸ. ಸುಪ್ರಸಿದ್ಧ ಯಕ್ಷಗಾನ ಅರ್ಥಧಾರಿ ತೆಕ್ಕಟ್ಟೆ ಬಾಬಣ್ಣ ಶಾನುಭಾಗರ ಸುಪುತ್ರ. ಅಧ್ಯಾಪಕರಾಗಿದ್ದ ಆನಂದ ಮಾಸ್ತರರು ಆ ಕಾಲದಲ್ಲಿ ಖ್ಯಾತ ತಾಳಮದ್ದಳೆ ಅರ್ಥಧಾರಿಗಳಾಗಿದ್ದರು. ಶೇಣಿಯವರು ಸುರತ್ಕಲ್ ಮೇಳ ಸೇರಿದಾಗ ಅವರಿಗೆ ಸರಿಸಮಾನ ಎದುರು ಅರ್ಥಧಾರಿ ಬೇಕೆಂದು ಸುರತ್ಕಲ್ ಮೇಳದ ಯಜಮಾನರಾದ ಕಸ್ತೂರಿ ಪೈ ಸೋದರರು ತೆಕ್ಕಟ್ಟೆಯವರನ್ನು ಮೇಳಕ್ಕೆ ಸೇರಿಸಿದರು. "ಧೋತಿ ಉಟ್ಟು, ಖಾದಿ ಪೈರಾನ್, ಹೆಗಲಲ್ಲಿ ಶಾಲು ಹಾಗೂ ತಲೆಗೊಂದು ದೊಡ್ಡ ಗಾಂಧಿ ಟೊಪ್ಪಿ" ಇದು ತೆಕ್ಕಟ್ಟೆಯವರ ಉಡುಪು. ನೋಡಲು ತುಸು ಕಪ್ಪಗಾದರೂ ಆಜಾನಬಾಹುವಾಗಿ ನೋಡುವಾಗಲೇ ಗೌರವ ಹುಟ್ಟಿಸುವ ವ್ಯಕ್ತಿತ್ವ. ರಾಮಾಯಣ, ಭಾರತ, ವೇದೋಪನಿಷತ್ತು, ಕಾವ್ಯ ಮೀಮಾಂಸೆ, ರನ್ನ, ಪಂಪ, ಕಾಳಿದಾಸ, ಜೈನಪುರಾಣ ಹಾಗೂ ಸಮಕಾಲೀನ ಸಾಹಿತ್ಯ ಹೀಗೆ ಎಲ್ಲವನ್ನೂ ಓದಿ ಅರಗಿಸಿ, ತಮ್ಮ ಅರ್ಥ ವೈಭವದಲ್ಲಿ ಮೆರೆದವರು. ಶೇಣಿಯವರೊಂದಿಗೆ ಸಾವಿರಾರು ಆಟ ಕೂಟಗಳಲ್ಲಿ ಎದುರು ಅರ್ಥಧಾರಿಯಾಗಿ ಮಿಂಚಿದ ಇವರ ಅರ್ಥಗಾರಿಕೆಯಲ್ಲಿ ದೊಡ್ಡ ಸಾಮಗರ ಛಾಯೆ ಕಾಣುತ್ತಿತ್ತು. ಶೇಣಿಯವರು ಅತೀ ಹೆಚ್ಚು ಗೌರವ ಕೊಡುತ್ತಿದ್ದುದು ದೊಡ್ಡ ಸಾಮಗರಿಗೆ. ಆದರೆ "ಯೋಚಿಸಿ" ಅರ್ಥ ಹೇಳುತ್ತಿದ್ದುದು ತೆಕ್ಕಟ್ಟೆಯವರು ಎದುರಾಳಿಯಾದಾಗ. ಶೇಣಿಯವರಷ್ಟೇ (ಅವರಿಗಿಂತಲೂ ಹೆಚ್ಚು ಎಂದೂ ಅಭಿಪ್ರಾಯವಿದೆ) ಸಮರ್ಥರಾದ ಇವರು ಶೇಣಿಯವರ ಎದುರು ಸೋಲುತ್ತಿದ್ದುದು ಅರ್ಥಗಾರಿಕೆಯಲ್ಲಿ ಅಲ್ಲ, ರಸಾಭಿವ್ಯಕ್ತಿ ಪ್ರಸ್ತುತಪಡಿಸುವಲ್ಲಿ.
ಹೌದು, ತೆಕ್ಕಟ್ಟೆಯವರ ದೌರ್ಬಲ್ಯವೇ ಅದು. ರಸ ಪ್ರಸ್ತುತಪಡಿಸುವಲ್ಲಿ, ಸ್ವರ ಏರಿಳಿತದ ಏಕಾಗ್ರತೆ ಇಲ್ಲದ ಕಾರಣ ಇವರು ಶೇಣಿಯವರನ್ನು ಮೀರಲಾಗಲಿಲ್ಲ. ಈ ಕಾರಣದಿಂದಾಗಿಯೇ, ಎಷ್ಟೋ ಕಡೆ ಶೇಣಿಯವರು ತೆಕ್ಕಟ್ಟೆಯವರ ಎದುರು ವಾದದಲ್ಲಿ ಸೋತರೂ ಸ್ವರಭಾರ ಹಾಗೂ ರಸಾಭಿವ್ಯಕ್ತಿಯಿಂದ ಮಿಂಚುತ್ತಿದ್ದರು.

ಸುರತ್ಕಲ್ ಮೇಳದ "ಸಿರಿಸೀಮೆದ ಕರಿಬಂಟ" ತುಳು ಪ್ರಸಂಗ. ಶೇಣಿಯವರ ರಾಜನ ಪಾತ್ರವಾದರೆ, ತೆಕ್ಕಟ್ಟೆಯವರು ಆ ರಾಜನ ಮಂತ್ರಿ. ರಾಜ ತನ್ನ ಕಿರಿ ಮಡದಿಯ ದುರ್ಭೋಧೆಗೊಳಗಾಗಿ ತನ್ನ ಹಿರಿಯ ಹೆಂಡತಿಯಲ್ಲಿ ಜನಿಸಿದ ಮಗನನ್ನು ಕೊಲ್ಲಲು ಮಂತ್ರಿಯಲ್ಲಿ ಹೇಳುವ ಸನ್ನಿವೇಶ. ತೆಕ್ಕಟ್ಟೆಯವರು ಇದು ಸರಿಯಲ್ಲ ಎಂದು ಶಾಸ್ತ್ರಾಧಾರ ಸಹಿತ ಮೇಲ್ಗೈಯಾದರು. ಶೇಣಿಯವರಿಗೆ ಯಾವ ಆಧಾರವೂ ಸಿಗದೇ ಕೊನೆಗೆ ಪ್ರತ್ಯುತ್ಪನ್ನಮತಿ ತೋರಿಸಿಯೇಬಿಟ್ಟರು.
"ಮಂತ್ರೀ, ಮಾನವನಿಗೆ ಶಿರ, ಭುಜ, ಕೈ ಹಾಗೂ ಕಾಲುಗಳು ಪ್ರಧಾನ ಅಂಗ ತಾನೇ? ಅದರಲ್ಲಿ ಶ್ರೇಷ್ಠ ಶಿರ ಎಂದು ಒಪ್ಪುತ್ತಿ ತಾನೇ? ಅರಸನಾಗಿ ನಾನು ಶಿರವಾದರೆ ಮಂತ್ರಿಯಾದ ನೀನು ಭುಜ. ಶಿರ ಹೇಳಿದ ಹಾಗೆ ಭುಜ ಕೇಳಬೇಕು. ಕಡಿ ಅವನ ತಲೆಯನ್ನು" ಎಂದಾಗ ತೆಕ್ಕಟ್ಟೆಯವರ ವಾದ ನಿಂತಿತು.

ಕೌರವನಾಗಿ ತೆಕ್ಕಟ್ಟೆಯವರ ಪೀಠಿಕೆ
"ಪಾಂಡವರಿಗೆ ವಿಷ ಕೊಟ್ಟದ್ದಕ್ಕೆ ನನಗೆ ಈಗಲೂ ಪಶ್ಚಾತ್ತಾಪ ಉಂಟು"
ಎಂದಾಗ ಇಡೀ ಸಭೆಯೇ ಬೆರಗಾಗುವಷ್ಟರಲ್ಲಿ,
"ನಾನು ಕೊಟ್ಟ ವಿಷದ ಪ್ರಮಾಣ ಕಮ್ಮಿಯಾಯಿತಲ್ಲಾ ಎಂಬ ಬಗ್ಗೆ"
ಎಂದಾಗ ಸಭೆಯಿಂದ ಕರತಾಡನ.
ಇದರಲ್ಲೇನು ವಿಶೇಷ, ಎಲ್ಲಾ ಕಲಾವಿದರು ಹೀಗೆಯೇ ಹೇಳುವುದಲ್ಲಾ ಎಂದು ಯೋಚುಸುತ್ತೀರಲ್ಲಾ? ವಿಶೇಷ ಇರುವುದೇ ಅಲ್ಲಿ. ಕೌರವನ ಈ ರೀತಿಯ ಆಲೋಚನೆಯ ಕಲ್ಪನೆಯನ್ನು ಪ್ರಪ್ರಥಮವಾಗಿ ಮಂಡಿಸಿದ್ದೇ ತೆಕ್ಕಟ್ಟೆಯವರು ಎಂಬುದು ಗಮನಾರ್ಹ.
ಮುಂದುವರಿದು, "ಏನ ಮಾಡುವುದು. ಆ ಭೀಷ್ಮಾಚಾರ್ಯರು ಧರ್ಮರಾಜನಿಗೆ ಯುವ ರಾಜ್ಯಾಭಿಷೇಕ ಮಾಡಿದರು" ಎಂದಾಗ, ಭಾಗವತರು "ನೀನೇಕೆ ವಿರೋಧಿಸಲಿಲ್ಲ" ಎಂದಾಗ
"ನಾನು ಆ ಕಾಲದಲ್ಲಿ ವಿರೋಧಿಸಿದ್ದೆ, ಆದರೆ ನನ್ನ ವಿರೋಧ ಅವರಿಗೆ ಕೇಳಲಿಲ್ಲ. ನೂರು ಕಾಗೆಯ ಕೂಗಿನ ಎದುರು ಒಂದು ಕೋಗಿಲೆಯ ಇಂಪು ಸ್ವರ ಕೇಳಿಸುತ್ತದೆಯೇ" ಎಂದರು.

ನಿಟ್ಟೆಯಲ್ಲಿ ಸುರತ್ಕಲ್ ಮೇಳದವರ "ಬ್ರಹ್ಮ ಕಪಾಲ" ಆಟ.  ವಾ.ಸಾಮಗರ ಈಶ್ವರ. ತುಂಬಾ ಅದ್ಭುತವಾಗಿ ನಿರ್ವಹಿಸಿದರು. ತೆಕ್ಕಟ್ಟೆಯವರ ಮಹೋಗ್ರನ ಪಾತ್ರ. ಆತನಲ್ಲಿ ಭಿಕ್ಷೆ ಕೇಳುವ ಸಂಧರ್ಭ. ಸಾಮಗರು "ಭವತೀ ಭಿಕ್ಷಾಂದೇಹಿ" ಎಂದರು.
ತೆಕ್ಕಟ್ಟೆಯವರು "ಭಿಕ್ಷೆ ಕೇಳಲು ಅಧಿಕಾರವಿರುವುದು ನಾಲ್ಕು ಮಂದಿಗೆ ಮಾತ್ರ. ಅದರಲ್ಲಿ ನೀನಾರು" ಎಂದರು.
 ಸಾಮಗರು "ಹಾಗಾದರೆ ದಾನ ನೀಡಿ" ಎಂದರು.
ತೆಕ್ಕಟ್ಟೆಯವರು "ದಾನ ಕೇಳಲು ಅಧಿಕಾರ ಇರುವುದು ಮೂರು ಮಂದಿಗೆ ಮಾತ್ರ. ಇದರಲ್ಲಿ ನೀನು ಯಾರು?" ಎಂದರು.
ಸಾಮಗರೂ ಬಿಡಲಿಲ್ಲ. "ಹಾಗಾದರೆ ಸಹಾಯ ಮಾಡಿ" ಎಂದರು.
ತೆಕ್ಕಟ್ಟೆಯವರು “ಸಹಾಯ ಕೇಳಲು ಅಧಿಕಾರ ಇರುವುದು ಇಬ್ಬರಿಗೆ ಮಾತ್ರ. ಆ ಇಬ್ಬರಲ್ಲಿ ನೀ ಯಾರು" ಎನ್ನಬೇಕೇ?”’
ಸಾಮಗರು ಸಂಪೂರ್ಣ ಸೋತರೂ ಬಿಡಲಿಲ್ಲ. ಎಷ್ಟೆಂದರೂ ಸಾಮಗರಲ್ಲವೇ?
ಕೊನೆಯ ಅಸ್ತ್ರ ಬಿಟ್ಟರು. "ಹಾಗಾದರೆ ಏನಾದರೂ ಆದೀತು. ಕೊಡಿ"  ಅಂದುಬಿಟ್ಟರು.
ತೆಕ್ಕಟ್ಟೆಯವರು, "ಏನಾದರೂ ಕೇಳುವ ಅಧಿಕಾರ ಇರುವುದು ಒಬ್ಬನಿಗೆ ಮಾತ್ರ. ಅದು ನೀನಲ್ಲವಲ್ಲಾ" ಎಂದಾಗ ಸಾಮಗರಿಗೆ ಮುಂದಿನ ಪದ್ಯಕ್ಕೇ ಹೋಗಬೇಕಾಯಿತು.
(ತೆಕ್ಕಟ್ಟೆಯವರು ಈ ಎಲ್ಲಾ ಲೆಕ್ಕಗಳಿಗೂ ವಿವರಣೆ ಕೊಟ್ಟಿದ್ದರು. ನನಗೆ ಮರೆತುಹೋಗಿದೆ. ಯಾರಿಗಾದರೂ ಈ ವಿವರಣೆ ತಿಳಿದಿದ್ದಲ್ಲಿ ಈ ವೇದಿಕೆಗೆ ಹಂಚಬೇಕಾಗಿ ವಿನಂತಿ) 

ಬೆಳಿಗ್ಗೆ ಬರುವಾಗ ನಾನು ಹಾಗೂ ನನ್ನೊಂದಿಗಿದ್ದ ಸದಾಶಿವ ರಾವ್ ರವರು ಮೇಳದ ವಾಹನದಲ್ಲೇ ಮೂಡಬಿದ್ರಿಗೆ ಬಂದೆವು. ಆಗ ನಾನು ಸಾಮಗರಲ್ಲಿ
"ಎಂಥ ಸಾಮಗರೇ ನೀವು? ಇಷ್ಟು ದೊಡ್ಡ ವಿದ್ವಾಂಸರಾಗಿ ತೆಕ್ಕಟ್ಟೆಯವರ ಮಾತಿಗೆ ಸೋತಿರಲ್ಲಾ?" ಎಂದೆ. ಆಗ ಸಾಮಗರು ಎಲ್ಲಾ ಕಲಾವಿದರ ಎದುರಲ್ಲೇ, ಅವರದೇ ಶೈಲಿಯಲ್ಲಿ
"ಏನು ಹೇಳುತ್ತೀರಿ ಕುಡ್ವರೇ ನೀವು? ತೆಕ್ಕಟ್ಟೆಯವರ ಎದುರು ನಾನು ವಾದಿಸಲಿಕ್ಕುಂಟೇ? ಅವರೊಂದು ದೊಡ್ಡ ಜ್ಞಾನದ ಗೋಡೌನ್. ಅವರ ಎದುರು ನಾನು ಬಿಡಿ. ನನ್ನ ದೊಡ್ಡಪ್ಪ (ದೊಡ್ಡ ಸಾಮಗರು)ನಿಗೂ ಕಷ್ಟವಾಗುತಿತ್ತು" ಎಂದರು.
ಎಂಥಹಾ ಅರ್ಥಗರ್ಭಿತ ಮಾತು.

ಬಜ್ಪೆಯಲ್ಲಿ ನನ್ನ ಸಂಯೋಜನೆಯಲ್ಲಿ "ಶರಸೇತು ಬಂಧನ" ಪ್ರಸಂಗ.  ರಾ. ಸಾಮಗರ ಹನೂಮಂತ, ತೆಕ್ಕಟ್ಟೆಯವರ ಅರ್ಜುನ. ವಾದ ಜೋರಾಗಿ ನಡೆದು, ಸಾಮಗರು
“ನೂರು ಯೋಜನ ಸೇತು ಕಟ್ಟಿದ ಕಾರಣ ನನ್ನ ಶರೀರ ಬಡವಾಯಿತು" ಎಂದರು.
ಕೂಡಲೇ ತೆಕ್ಕಟ್ಟೆಯವರು
"ನೂರು ಯೋಜನ ಭಾಗಿಸು ಎಪ್ಪತ್ತೇಳು ಕೋಟಿ ಎಂದರೆ ತಲಾ ಒಬ್ಬರ ಶ್ರಮ ಎಷ್ಟಾಯಿತು?"
ಎಂದಾಗ ಇಡೀ ಸಭೆಯೇ ಗೊಳ್ಳೆಂದಿತು. ಮುಂದಿನ ಪದ್ಯಕ್ಕೆ ಎತ್ತುಗಡೆ ಕೊಡುವಾಗ, ಸಾಮಗರು
"ಅಯ್ಯಾ, ಗಣಿತ ಶಾಸ್ತ್ರಜ್ಞನೇ ಕೇಳು" ಎಂದರು.
ಸಭೆ ಪುನಃ ನಗೆಗಡಲಲ್ಲಿ ತೇಲಾಡಿತು.

ಇಂದು ಸುಪ್ರಸಿದ್ಧ ಅರ್ಥಧಾರಿಯಾದ ಶ್ರೀ ಜಬ್ಬಾರ್ ಸಮೋ ರವರು ಯಕ್ಷಗಾನ ಸೇರಲು ಮುಖ್ಯ ಪ್ರೇರಣೆಯೇ, ತೆಕ್ಕಟ್ಟೆಯವರ ಅರ್ಥಗಾರಿಕೆ. ತೆಕ್ಕಟ್ಟೆಯವರ ಕಟ್ಟಾ ಅಭಿಮಾನಿಯಾದ ಜಬ್ಬಾರ್ ಸುರತ್ಕಲ್ ಮೇಳದ ಎಲ್ಲಾ ಆಟ ನೋಡುತ್ತಿದ್ದರು. ತೆಕ್ಕಟ್ಟೆಯವರ ಎಲ್ಲಾ ಕೂಟಗಳ ಖಾಯಂ  ಪ್ರೇಕ್ಷಕರು ಜಬ್ಬಾರ್. ಆಟ ಕೂಟ ನೋಡಿ ಮರುದಿನ ಕನ್ನಡಿಯ ಎದುರು ನಿಂತು ತೆಕ್ಕಟ್ಟೆಯವರ ರೀತಿಯಲ್ಲೇ ಅರ್ಥ ಹೇಳಲು ಪ್ರಯತ್ನಿಸುತ್ತಿದ್ದರು. ಯಶಸ್ವಿಯೂ ಆದರು. ಜಬ್ಬಾರರ ಕೆಲವೊಂದು ಅರ್ಥಗಳಲ್ಲಿ ತೆಕ್ಕಟ್ಟೆಯವರ ಅರ್ಥಗಾರಿಕೆಯ ಛಾಯೆಯನ್ನು ಕಾಣಬಹುದು.
ತೆಕ್ಕಟ್ಟೆಯವರು ನೋಡಲು ಗಂಭೀರರಾದರೂ ಹಾಸ್ಯ ಪ್ರಜ್ಞೆ ಉಳ್ಳವರು. ಗಂಭೀರವಾಗಿಯೇ  ಹಾಸ್ಯವನ್ನು ಸ್ಫುರಿಸುತ್ತಿದ್ದರು. ಅವರು ನನ್ನ ಖಾಸಾ ಭಾವನ ಅಣ್ಣನಾದ ಕಾರಣ ನನ್ನನ್ನು ಭಾವಾ ಎಂದೇ ಕರೆಯುತ್ತಿದ್ದರೂ, ನಾನು ಅವರನ್ನು "ಮಾಸ್ಟ್ರುಮಾಮು" ಎಂದೇ ಕರೆಯುತಿದ್ದೆ. ಮೂಡಬಿದಿರೆಯಲ್ಲಿ ಆಟವಾದರೆ, ನನ್ನ ಅಂಗಡಿಗೆ ಬಂದಾಗ ನಾನು "ಮಾಸ್ಟ್ರುಮಾಮು, ನಿಮಗೆ ಸಿಯಾಳ ಆದೀತಾ, ಚಹಾ ಹೇಳಬೇಕಾ" ಎಂದು ಕೇಳುತ್ತಿದ್ದೆ. ಸಿಯಾಳ ಹೇಗೂ ನನ್ನ ಅಂಗಡಿಯಲ್ಲೇ ಇತ್ತು. ಆವಾಗಲೆಲ್ಲಾ ತೆಕ್ಕಟ್ಟೆಯವರು
"ಭಾವಾ, ಚಹಾ ಹೇಳಿ. ಚಹಾ ಬರುವವರೆಗೆ ಸಿಯಾಳ ಕುಡಿಯುತ್ತೇನೆ"
ಎಂದು ಹಾಸ್ಯವಾಗಿ ಹೇಳುತ್ತಿದ್ದರು.

ಒಮ್ಮೆ "ವಾಲಿಮೋಕ್ಷ" ಪ್ರಸಂಗ. ಶೇಣಿಯವರ ವಾಲಿ, ಕುಂಬ್ಳೆಯವರ ಶ್ರೀರಾಮ, ತೆಕ್ಕಟ್ಟೆಯವರ ಸುಗ್ರೀವ. ವಾಲಿ ಸುಗ್ರೀವರ ಮೊದಲ ಯುದ್ಧವಾಗಿ ಸುಗ್ರೀವ ಸೋತು ರಾಮನ ಸಂಭಾಷಣೆಯಾದ ನಂತರ ಗುರುತಿಗಾಗಿ ಸುಗ್ರೀವನಿಗೆ ಗಜಪುಷ್ಪಮಾಲೆ ಹಾಕುವಾಗ, ತೆಕ್ಕಟ್ಟೆಯವರು
"ಶ್ರೀರಾಮ, ಹೇಗೆ, ಈಗ ನಿನ್ನನ್ನು ನಂಬಬಹುದಾ? ಏಕೆಂದರೆ ಮಾಲೆ ಹಾಕಿದ್ದಿ. ನಾನೂ ತಿಳಿದಿದ್ದೇನೆ. ನೀವೆಲ್ಲಾ ಮಾನವರು ದೇವಿಗೆ ಬಲಿ ಕೊಡಲು ಕುರಿ ಕೊಂಡೊಯ್ಯುವಾಗ, ಆ ಕುರಿಗೆ ಮಾಲೆ ಹಾಕಿ ಕೊಂಡೊಯ್ಯುವುದಂತೆ. ಹಾಗೆಯೇ, ಈ ಸುಗ್ರೀವ, ನಿನ್ನ ಹರಕೆಯ ಕುರಿ ಅಲ್ಲ ತಾನೇ?" ಎಂದು.

"ಭೀಷ್ಮ ವಿಜಯ" ದಲ್ಲಿ ರಾ.ಸಾಮಗರ ಭೀಷ್ಮ, ತೆಕ್ಕಟ್ಟೆಯವರ ಏಕಲವ್ಯ. ತೆಕ್ಕಟ್ಟೆಯವರ ಏಕಲವ್ಯ ಬಲು ಪ್ರಸಿದ್ಧ. ಕುಂದಾಪುರ ಕನ್ನಡ ಭಾಷೆ ಕೇಳಲು ಭಾರೀ ಚೆಂದ. ತೆಕ್ಕಟ್ಟೆಯವರು, ಸಾಮಗರಲ್ಲಿ,
"ಇಕೋ ಮಾರಾಯಾ, ನಿನಗಂತೂ ಮದುವೆ ಬೇಡಾ. ನನಗೆ ಈ ಹೆಣ್ಣು ಬೇಕು. ಆದ ಕಾರಣ,  ನೀನೊಮ್ಮೆ ಸತ್ತಾದರೂ ಹೋಗಯ್ಯಾ. ನನಗಾದರೂ ಮದುವೆ ಆಗ್ತೈತಲ್ಲಾ" ಎಂದರು.

ತುಳು ಪ್ರಸಂಗದ ಅರಸನ ಪಾತ್ರ. ತೆಕ್ಕಟ್ಟೆಯವರು "ಯಾರಲ್ಲಿ" ಎಂದರು. ಆಗ ದೂತನಿಗೆ ಪ್ರವೇಶ. ಅಷ್ಟರಲ್ಲಿ ಸಭೆಯಲ್ಲಿ ನೆಲದಲ್ಲಿ ಕುಳಿತವನೊಬ್ಬ "ನಾನು" ಎಂದ. ತೆಕ್ಕಟ್ಟೆಯವರು ಕೂಡಲೇ ಸಿಂಹಾಸನದಿಂದ ಇಳಿದು ಎದುರು ಬಂದು, ಆ ಸಭಿಕನತ್ತ ಕಣ್ಣು ಹಾಯಿಸಿ
"ಓಹೋ, ನೀನು ಅಲ್ಲಿದ್ದಿಯಾ? ಅಲ್ಲೇ ಕುಳಿತುಕೋ. ಗೊಬ್ಬರ ತುಂಬಲಿಕ್ಕೆ ಬಂದವನಲ್ಲವೇ ನೀನು? ನಿನ್ನನ್ನು ಮತ್ತೆ ಕರೆಯುತ್ತೇನೆ" ಎಂದಾಗ ಸಭೆಯೇ ನಗೆಗಡಲಲ್ಲಿ ತೇಲಾಡಿತು.
(ಈ ಸಂಭಾಷಣೆ ತುಳುವಿನಲ್ಲೇ ಆಡಿದಾಗ ಸೊಗಸೇ ಬೇರೆ)

"ಶನೀಶ್ವರ ಮಾಹಾತ್ಮ್ಯೆ" ಯ ನಂದಿಶೆಟ್ಟಿ ತೆಕ್ಕಟ್ಟೆಯವರ ಮರೆಯಲಾಗದ ಪಾತ್ರ. ಶೆಟ್ಟಿಯ ಜಿಪುಣತನವನ್ನು ಬಿಂಬಿಸುವಲ್ಲಿ ಅಪ್ರತಿಮರು. ಪ್ರಸಂಗದ ಕೊನೆಯಲ್ಲಿ ಶನೀಶ್ವರ ದೇವರು ಪ್ರತ್ಯಕ್ಷನಾಗಿ
"ತನ್ನನ್ನು ಎಳ್ಳೆಣ್ಣೆಯ ದೀಪ ಹಚ್ಚಿ ಆರಾಧಿಸಿದರೆ ಅವರಿಗೆ ನಾನು ತೊಂದರೆ ಕೊಡದೇ, ಅನುಗ್ರಹಿಸುತ್ತೇನೆ"
ಎಂದು ಹೇಳಿ ಅದೃಶ್ಯನಾಗುತ್ತಾನೆ. ಇಲ್ಲಿಗೆ ಕಥೆಗೆ ಮಂಗಲ. ಸಭಿಕರೆಲ್ಲರೂ ಆಸನದಿಂದ ಮೇಲೇಳತೊಡಗುವಷ್ಟರಲ್ಲಿ, ತೆಕ್ಕಟ್ಟೆಯವರು, ಮುಂದೆ ಬಂದು ಮೈಕಿನ ಎದುರು ನಿಂತು,
"ಮಹಾಜನರೆಲ್ಲರಲ್ಲೂ ಒಂದು ವಿಜ್ಞಾಪನೆ"
ಎಂದಾಗ ಸಭಿಕರೆಲ್ಲರೂ ಪುನಃ ಕುಳಿತುಕೊಳ್ಳುತ್ತಾರೆ. ಸುರತ್ಕಲ್ ಮೇಳದಲ್ಲಿ ಪ್ರಕಟಣೆ ಮಾಡುವುದು ಯಾವಾಗಲೂ ತೆಕ್ಕಟ್ಟೆಯವರ ಜವಾಬ್ದಾರಿ. ಬಹುಷಃ ಪ್ರಕಟಣೆ ಇರಬಹುದೆಂದು ಸಭಿಕರು ನಿರೀಕ್ಷೆಯಲ್ಲಿದ್ದಾಗ ತೆಕ್ಕಟ್ಟೆಯವರು,
"ಈಗ ತಾನೇ ಶನಿದೇವರು ಹೇಳಿದ್ದೇನೆಂದು ಗೊತ್ತಿದೆ ತಾನೇ. ಶನಿದೇವರಿಗೆ ಬೇಕಾದ ಶುದ್ಧ ಎಳ್ಳೆಣ್ಣೆ ನಮ್ಮ ಅಂಗಡಿಯಿಂದಲೇ ತೆಗೆದುಕೊಳ್ಳಿ"
ಎನ್ನುವಾಗ ಸಭಿಕರು ಮನಸಾ ನಕ್ಕು ಮನೆಗೆ ತೆರಳಿದರು.
(ಶೆಟ್ಟಿಯ ವ್ಯಾಪಾರಿ ಬುದ್ಧಿಯನ್ನು ಪಾತ್ರದಲ್ಲಿ ತಲ್ಲೀನರಾಗಿ ತೋರಿಸಿಕೊಟ್ಟರು)

ಮೂಡಬಿದಿರೆಯಲ್ಲಿ ಸುರತ್ಕಲ್ ನವರ "ಸತ್ಯ ಹರಿಶ್ಚಂದ್ರ" ಪ್ರಸಂಗ. ಶೇಣಿಯವರ ಪೂರ್ವಾರ್ಧದ ಹರಿಶ್ಚಂದ್ರ. ಕಾಡಿಗೆ ಹೋಗುವಲ್ಲಿ ತೆಕ್ಕಟ್ಟೆಯವರ ಹರಿಶ್ಚಂದ್ರ.  ಹರಿಶ್ಚಂದ್ರನಾಗಿ ತೆಕ್ಕಟ್ಟೆಯವರ ಮನಕರಗಿಸುವ ಚಿತ್ರಣ. ಶೇಣಿಯವರು ಸಾಮಾನ್ಯವಾಗಿ ತಮ್ಮ ಪಾತ್ರ ಮುಗಿದ ನಂತರ ಚೌಕಿಯಲ್ಲೇ ಕಾಲ ಕಳೆಯುವವರು. ಅಂದೇಕೋ ಸಭೆಯ ಎದುರಲ್ಲೇ ಬಂದು ಕುಳಿತರು. ತೆಕ್ಕಟ್ಟೆಯವರ ಹರಿಶ್ಚಂದ್ರ ಅತ್ಯುತ್ತಮವಾಗಿ ನಿರ್ವಹಿಸಲ್ಪಟ್ಟಿತು. ಆ ಪ್ರಸಂಗದಲ್ಲಿ ರಾತ್ರಿ ಮೂರು ಗಂಟೆಯಿಂದ ಐದು ಗಂಟೆ ತನಕ ರಂಗಸ್ಥಳದಲ್ಲಿ ನಾಲ್ಕೇ ಪಾತ್ರಗಳು. ಹರಿಶ್ಚಂದ್ರ, ಚಂದ್ರಮತಿ, ರೋಹಿತಾಶ್ವ ಹಾಗೂ ನಕ್ಷತ್ರಿಕ. ರಮೇಶಾಚಾರ್ಯರ ಚಂದ್ರಮತಿ, ಉಜ್ರೆ ರಾಜ ರೋಹಿತಾಶ್ವ, ಜೋಗಿಯವರ ನಕ್ಷತ್ರಿಕ. ಉತ್ತಮ ಹೊಂದಾಣಿಕೆಯಿದ್ದ ಕಾರಣ ಪ್ರೇಕ್ಷಕರು ತ್ರೇತಾಯುಗದಲ್ಲಿದ್ದರು, ಶೇಣಿಸಹಿತ. ತೆಕ್ಕಟ್ಟೆಯವರ ಮನೋಜ್ಞ ಅಭಿನಯ ಹಾಗೂ ಮಾತುಗಾರಿಕೆಯಿಂದ ಸಭಿಕರೆಲ್ಲರ ಕಣ್ಣಲ್ಲಿ ನೀರು ಸುರಿಯಲಾರಂಭಿಸಿತು. (ಈ ಮಾತು ಉತ್ಪ್ರೇಕ್ಷೆ ಅಲ್ಲ. ಮಲಗಿದವರ ಹೊರತುಪಡಿಸಿ ಎಲ್ಲರ ಕಣ್ಣಲೂ ನೀರು ಜಿನುಗುತಿತ್ತು.) ಕೊನೆಗೆ ಕಥೆ ಸುಖಾಂತವಾಗಿ ಆಟ ಮುಗಿಯಿತು.
ಶೇಣಿಯವರು ಚೌಕಿಗೆ ಹೋದಾಗ ಅವರ ಹಿಂದೆಯೇ ನಾನೂ ಹೋದೆ. ದೇವರ ಎದುರು ಮಂಗಲವಾಯಿತು. ಎಲ್ಲಾ ಕಲಾವಿದರ ಎದುರಲ್ಲಿ ಶೇಣಿಯವರು, ಯಜಮಾನ ವರದರಾಯ ಪೈಗಳಲ್ಲಿ
"ಯಜಮಾನರೇ, ಇನ್ನು ಮುಂದೆ ಈ ಪ್ರಸಂಗದಲ್ಲಿ, ತೆಕ್ಕಟ್ಟೆಯವರಿಗೆ ಹರಿಶ್ಚಂದ್ರ ಕೊಡುವುದಾದಲ್ಲಿ ಟಿಕೇಟಿನ ಆಟ ಆಡಿಸಬೇಡಿ. ಧರ್ಮಾರ್ಥ ಬಯಲಾಟ ಆದರೆ ಮಾತ್ರ ಆಡಿಸಿ” ಎಂದರು.
ಪೈಗಳು "ಯಾಕೆ  ಭಟ್ರೇ" ಎಂದರು.
ಆಗ ಶೇಣಿಯವರು
"ಅಲ್ಲಾ ಯಜಮಾನರೇ, ಇವತ್ತು ಇಡೀ ಸಭೆಯೇ ಕಣ್ಣೀರಲ್ಲಿ ಮುಳುಗಿತು. ಹಣ ಕೊಟ್ಟು ಅಳುವ ಪರಿಸ್ಥಿತಿ ಬೇಕೇ" ಎನ್ನುತ್ತಾ, ತೆಕ್ಕಟ್ಟೆಯವರನ್ನು ನಿರ್ಮಲ ಮನಸ್ಸಿನಿಂದ ಅಪ್ಪಿ ಹಿಡಿದರು.
(ಈ ಘಟನೆ ನಾನು ಕಣ್ಣಾರೆ ನೋಡಿದ್ದು)

O :-  ಎಂ. ಶಾಂತರಾಮ ಕುಡ್ವ, ಮೂಡಬಿದಿರೆ
         M.  Shantharama Kudva, Moodabidri



No comments:

Post a Comment