Thursday 2 July 2015

ಶೇಣಿ ವೈಭವ - ಭಾಗ ೪

ಶಂಕರ ನಾರಾಯಣ ಸಾಮಗರ ಭಾಷಾಶೈಲಿ ಸಡಿಲ ಹಾಗೂ ತುಸು ಗ್ರಾಮ್ಯಶೈಲಿಯಾದರೆ, ಶೇಣಿಯವರದ್ದು ಕಠಿಣತೆಯ ಭಾಷಾಶೈಲಿ.
ಶೇಣಿಯವರನ್ನು ಸಾಮಗರ ಎದುರಾಳಿಯಾಗಿ ಗುರುತಿಸಿದ ಪ್ರಾರಂಭದಲ್ಲಿ "ಸುಧನ್ವ ಮೋಕ್ಷ" ಪ್ರಸಂಗ. ಸಾಮಗರು ಅರ್ಜುನನಾಗಿ ಶೇಣಿಯವರ ಸುಧನ್ವನಿಗೆ
"ಏನು, ಮೊನ್ನೆ ಮೊನ್ನೆ ಹುಟ್ಟಿದ ನೀನು ನನ್ನ ಎದುರಾಳಿಯಾಗಿ ಬಂದಿದ್ದಿಯಲ್ಲಾ"
ಎಂದರು. ಅದಕ್ಕೆ ಶೇಣಿಯವರು
"ಹೌದು. ನಿನ್ನ ಎದುರು ನಿಂತವರನ್ನು ನೀನು ಈಗಾಗಲೇ ತರಿದು ಆಯಿತಲ್ಲ. ಇನ್ನು ನಾನೇ ತಯಾರಾಗಬೇಕಿದೆ" ಎಂದರು.

          "ಭೀಷ್ಮ ಪರ್ವ " ಪ್ರಸಂಗ
ಸಾಮಗರು ಶ್ರೀಕ್ರಷ್ಣನಾಗಿ ಸುದರ್ಶನ ಚಕ್ರವನ್ನು ಹಿಡಿದು
"ಭೀಷ್ಮಾ, ಸುದರ್ಶನ ಚಕ್ರ ಹಿಡಿದಿದ್ದೇನೆ"  ಎಂದರು. ಶೇಣಿವರು
"ಸ್ವಾಮೀ, ನೀನು ಚಕ್ರವನ್ನು ಹಿಡಿದದ್ದು ನನ್ನ ಪುಣ್ಯ. ಎಲ್ಲಿಯಾದರೂ ಚಕ್ರವನ್ನು ಬಿಟ್ಟಿದ್ದರೆ ನನ್ನ ಶಿರ ಉರುಳುತಿತ್ತು. ಶಿಶುಪಾಲಾದಿಗಳನ್ನು ಕೊಂದಾಗ ನೀನು ಚಕ್ರ ಬಿಟ್ಟಿದ್ದಲ್ಲದೇ ಹಿಡಿದದ್ದಲ್ಲವಲ್ಲಾ"
ಎಂದಾಗ ಪ್ರೇಕ್ಷಕರ ಸಹಿತ ಸಾಮಗರೇ ಕರತಾಡನ ಮಾಡಿದರಂತೆ.

          "ಅತಿಕಾಯ ಮೋಕ್ಷ" ಪ್ರಸಂಗ
ಸಾಮಗರು ಅತಿಕಾಯನಾಗಿ "ಏತಕೆ ಮರುಳಾಹೆ ತಾತಾ" ಪದ್ಯಕ್ಕೆ, ಶ್ರೀರಾಮನನ್ನು ಹೊಗಳುತ್ತಾ,  ಮಾಡಿದ್ದು ತಪ್ಪಾಯಿತೆಂದು ಶ್ರೀರಾಮನ ಪಾದಕ್ಕೆ “ಪೊರಮಡು” ಎಂದಾಗ ಶೇಣಿಯವರು
"ಅತಿಕಾಯ, ನೀನೆಂದಂತೆ, ಎಲ್ಲಿಯಾದರೂ ಯುದ್ಧದಲ್ಲಿ ಈ ರಾವಣ ರಾಮನ ಬಾಣದಿಂದ ಶಿರ ಕತ್ತರಿಸಲ್ಪಟ್ಟರೂ, ನನ್ನ ಶಿರ ರಥದ ಹಿಂದೆ ಬೀಳೀತೇ ಹೊರತು ಆ ರಾಮನ ಪದತಲದಲ್ಲಿ ಬೀಳದು. ನೆನಪಿರಲಿ" ಎಂದರಂತೆ.
ಮರುದಿನ ಸಾಮಗರು
"ನಿನ್ನ ಇಂದಿನ ರಾವಣನ ಚಿತ್ರಣ ವಾಲ್ಮೀಕಿಯ ಕಲ್ಪನೆಯ ರಾಮನಂತೆ ಇತ್ತು"
ಎಂದು ಮೆಚ್ಚುಗೆ ವ್ಯಕ್ತಪಡಿಸಿದರಂತೆ.

"ಭೀಷ್ಮ ವಿಜಯ" ದ ಪರಶುರಾಮನಾಗಿ ಸಾಮಗರು "ಪಿಂದಕ್ಕಿಪ್ಪತ್ತೊಂದು ಬಾರಿ" ಪದ್ಯಕ್ಕೆ ವಿಸ್ತಾರವಾಗಿ ಅರ್ಥ ಹೇಳಿದರು. ಮುಂದಿನ ಪದ್ಯ ಭೀಷ್ಮನಿಗೆ "ಜನಿಸಲಿಲ್ಲ ಭೀಷ್ಮನಾಗ" ಎಂಬ ಪದ್ಯಕ್ಕೆ ಆ ಕಾಲದಲ್ಲಿ
"ಗುರುಗಳೇ, ಆ ಕಾಲದಲ್ಲಿ ಈ ಭೀಷ್ಮನಿದ್ದರೆ ಇಪ್ಪತ್ತೊಂದು ಬಿಡಿ, ಒಂದು ಸಲವೂ ಗೆಲ್ಲಕ್ಕಾಗುತ್ತಿರಲಿಲ್ಲ. ಈ ಭೀಷ್ಮ ನಿಮ್ಮನ್ನು ತಡೆಯುತ್ತಿದ್ದ"
ಎಂಬುದು ಸಾಮಾನ್ಯ ಭೀಷ್ಮನ ಅರ್ಥ ಹೇಳುವ ಕ್ರಮವಂತೆ.
            ಆದರೆ, ಶೇಣಿಯವರ ಅರ್ಥವೈಭವವೇ ಭಿನ್ನ-
"ಗುರುಗಳೇ, ಆ ಕಾಲದಲ್ಲಿ ನಿಮ್ಮ ಶಿಷ್ಯ ಈ ಭೀಷ್ಮ ಇದ್ದಿದ್ದರೆ ನೀವು ಹೋಗುವ ಅಗತ್ಯವೇ ಇರಲಿಲ್ಲ. ನಾನೇ ಆ ದುಷ್ಟರ ತಲೆ ತರಿಯುತ್ತಿದ್ದೆ"
ಎಂದು ಭೀಷ್ಮನ ಪಾತ್ರಕ್ಕೆ ಹೊಸ ಆಯಾಮ ಕೊಟ್ಟರು.
ಇಂದು ಎಲ್ಲಾ ಭೀಷ್ಮ ಪಾತ್ರಧಾರಿಗಳು ಈ ಪದ್ಯಕ್ಕೆ ಇದೇ ಅರ್ಥ ಹೇಳಲು ಶೇಣಿಯವರ ಅರ್ಥವೇ ಪ್ರೇರಣೆ.
ಶೇಣಿ ಸಾಮಗ ಜೋಡಿ ಆ ಕಾಲದಲ್ಲಿ ಅತ್ಯಂತ ಪ್ರಸಿದ್ಧಿ ಪಡೆದಿದ್ದು ಯಕ್ಷಗಾನದ ಮಟ್ಟಿಗೆ "ಸುವರ್ಣ ಯುಗ" ಎಂದರೂ ತಪ್ಪಾಗಲಾರದು.
ಗಾಂಧಿ ಟೋಪಿ, ಖಾದಿ ವಸ್ತ್ರ, ಕಚ್ಚೆಧಾರಿಯಾದ ಸಾಮಗರ ಎದುರಲ್ಲಿ ಮಿರಮಿರನೆ ಹೊಳೆಯುವ ಪೈರನ್ ಧಾರಿ, ಷೋಕಿಯಾಗಿ ಕಾಣಿಸುವ ಶೇಣಿ
ಈ ದೃಶ್ಯವನ್ನು ನಾವೀಗ ಕಲ್ಪಿಸಬೇಕಷ್ಟೇ.

ಕೆಲವು ತಾಸುಗಳ ಹಿಂದೆ, ಸುಧಾಕರ ಜೈನ್ ರವರು ಹೇಳಿದಂತೆ
“ನಾವು ಈ ವೈಭವ ಕಾಣಲು ಒಂದು ಐವತ್ತು ವರ್ಷಗಳ ಹಿಂದೆಯೇ ಹುಟ್ಟಬೇಕಾಗಿತ್ತು ಅಥವಾ ಶೇಣಿ-ಸಾಮಗರು ಈ ಕಾಲದಲ್ಲಿ ಇರಬೇಕಾಗಿತ್ತು”.
          "ಕಾಲಾಯ ತಸ್ಮೈ ನಮಃ"

O :-  ಎಂ. ಶಾಂತರಾಮ ಕುಡ್ವ, ಮೂಡಬಿದಿರೆ
         M.  Shantharama Kudva, Moodabidri

2 comments:

  1. ಯಕ್ಷಗಾನ ಕಲಾವಿದರ ಬಗ್ಗೆ ನಾವು ತಿಳಿದಿರದ ಅನೇಕ ವಿಚಾರಗಳು ನಿಮ್ಮ ಬರವಣಿಗೆಯಿಂದಾಗಿ ತಿಳಿಯುತ್ತಿವೆ. ಮಿತ್ರ ಶಾಂತಾರಾಮ್, ನಿಜಕ್ಕೂ ನೀವೊಂದು ಅದ್ಭುತ ಕೆಲಸವನ್ನು ಮಾಡುತ್ತಿದ್ದಿರಿ. ಮುಂದುವರಿಸಿ ದೇವರು ಒಳ್ಳೆಯದು ಮಾಡಲಿ.
    Yogish Shenoy

    ReplyDelete
  2. This comment has been removed by the author.

    ReplyDelete