Thursday 2 July 2015

ಶೇಣಿ

"ಶೇಣಿ" ಎಂಬ ಪದ ಯಕ್ಷರಂಗದಲ್ಲಿ ಸಂಚಲನ ಉಂಟು ಮಾಡುವಂಥಹದು. ಒಂದು ಕಾಲದಲ್ಲಿ ಶೇಣಿಯವರು ಆಟ ಅಥವಾ ಕೂಟದಲ್ಲಿ ಇದ್ದಾರೆಂದಾದರೆ ಸಭಾ ಭವನ ತುಂಬಿ ತುಳುಕುತ್ತಿತ್ತು. ಶೇಣಿಯವರ ಅರ್ಥ ಕೇಳಲಿಕ್ಕಾಗಿ ನೂರಾರು ಮೈಲು ದೂರದಿಂದ ಪ್ರೇಕ್ಷಕರು ಆರಂಭಕ್ಕಿಂತ ಮೊದಲೇ ಸೇರುತ್ತಿದ್ದರು.
"ಅಂಥಹದ್ದೇನಿತ್ತು ಶೇಣಿಯವರಲ್ಲಿ?"
ಇದಕ್ಕೆ ಉತ್ತರ "ಶೇಣಿಯವರ ಅರ್ಥದಲ್ಲಿ ಏನು ಇರಲಿಲ್ಲಾ? ಎಲ್ಲವೂ ಇತ್ತು"
ಪ್ರೇಕ್ಷಕರನ್ನು ಸೂಜಿಕಲ್ಲಿನಂತೆ ಆಕರ್ಷಿಸಿದ ಎಷ್ಟೋ ಅಂಶ ಶೇಣಿಯವರ ಅರ್ಥಗಾರಿಕೆಯಲ್ಲಿತ್ತು. ದೈವದತ್ತವಾಗಿ ಬಂದ ಆ ಕಂಠಶ್ರೀ, ಗಾಂಭೀರ್ಯದಿಂದ ಕೂರುವ ಭಂಗಿ, ಬಂಗಾರದ ಕನ್ನಡಕದೊಂದಿಗೆ ಮಿರಮಿರನೆ ಇಸ್ತ್ರಿ ಮಾಡಿದ ಪೋಷಾಕು ಎಲ್ಲವೂ ಆಕರ್ಷಕ.
ರಾಮಾಯಣ, ಮಹಾಭಾರತ, ವೇದ, ಉಪನಿಷತ್ತು ಹೀಗೆ ಸಕಲ ಗ್ರಂಥದ ಮೇಲೆ ಇರುವ ಪ್ರಭುತ್ವ.... ಸಮಕಾಲೀನ ರಾಜಕೀಯ, ಸಾಮಾಜಿಕ ವಿಷಯವನ್ನೂ ಸಂದರ್ಭೋಚಿತವಾಗಿ ಕಥೆಗೆ ಭಂಗ ಬಾರದಂತೆ ಅರ್ಥಗಾರಿಕೆಯಲ್ಲಿ ತರುವ ಚಾಣಾಕ್ಷತನ ಎಲ್ಲವೂ ಶೇಣಿಯವರಲ್ಲಿತ್ತು. ವಾದ, ಸಂವಾದ, ಪೀಠಿಕೆ, ಸ್ವಗತ ಎಲ್ಲವೂ ಉತ್ಕೃಷ್ಟ ಮಟ್ಟದವು. ನಾಯಕ, ಪ್ರತಿನಾಯಕ.... ಯಾವುದೇ ಪಾತ್ರವಾಗಲಿ ಶೇಣಿಯವರ ಅರ್ಥಗಾರಿಕೆಯಿಂದ ಗೆಲ್ಲುತ್ತಿದ್ದವು.
 ಹೆಚ್ಚಾಗಿ ಖಳಪಾತ್ರ ನಿರ್ವಹಿಸುತ್ತಿದ್ದ ಶೇಣಿಯವರಿಂದಾಗಿ ರಾವಣ, ವಾಲಿ, ಕೌರವ ಮಾಡಿದ್ದೇ ಸರಿ ಎಂದು ಪ್ರೇಕ್ಷಕರಿಗೆ ಅನಿಸಿದ್ದು ಸುಳ್ಳಲ್ಲ ಒಂದು ಕಾಲದಲ್ಲಿ ಬಣ್ಣದ ಪಾತ್ರಧಾರಿಯವರಿಗೆ ಮೀಸಲಾದ ರಾವಣ, ವಾಲಿ, ಮಾಗಧ ಮುಂತಾದ ಪಾತ್ರ ಶೇಣಿಯವರಿಗೆ ದೊರಕಿದ ನಂತರ ಆ ಪಾತ್ರ ಹೊಸ ರೂಪು ಪಡೆಯಿತು. ವೈಚಾರಿಕತೆ ಆಳವಾದ ವಿಶ್ಲೇಷಣೆಯೊಂದಿಗೆ ವಾದ, ಸಂವಾದದ ಸಾಧ್ಯತೆ ತೆರೆಯಲ್ಪಟ್ಟಿತು. ಕೌರವನಾಗಿ ಕೌರವ ಮಾಡಿದ್ದೇ ಸರಿ, ವಾಲಿಯಾಗಿ ವಾಲಿಯದ್ದೇ ಸರಿ. ಕೃಷ್ಣನಾಗಿ ಪಾಂಡವರದ್ದೇ ಸರಿ, ಶ್ರೀರಾಮನಾಗಿ ವಾಲಿ ರಾವಣರದ್ದೇ ತಪ್ಪು ಎಂದು ಆಧಾರ ಸಹಿತ ನಿರೂಪಣೆ ಮಾಡುವ ಕ್ರಮ ಶೇಣಿಯವರಿಗೆ ಮಾತ್ರ ಸಾಧ್ಯವಿತ್ತು. "ಆಡು ಮುಟ್ಟದ ಸೊಪ್ಪಿಲ್ಲ, ಶೇಣಿಯವರು ಕೈಯಾಡಿಸದ ವಿಷಯವಿಲ್ಲ".
 ವಾಲ್ಮೀಕಿ, ವ್ಯಾಸರು ಒಂದೊಂದೇ ರಾಮಾಯಣ, ಭಾರತ ಬರೆದಿದ್ದರೆ ಶೇಣಿಯವರು ಪ್ರತಿ ರಾತ್ರಿ ರಾಮಾಯಣ, ಭಾರತ ರಚಿಸುತ್ತಿದ್ದರು. (ಈ ಮಾತನ್ನು ನಾನು ಹೇಳುವುದು ಉತ್ಪ್ರೇಕ್ಷೆಯಲ್ಲ.  ಅಂದಿನ ಕಾಲದ ದೊಡ್ಡ ದೊಡ್ಡ ವಿದ್ವಾಂಸರು ವೇದಿಕೆಯಲ್ಲಿ ಅವರ ಬಗ್ಗೆ ಹೇಳಿದ್ದು) ಏಕೆಂದರೆ ಅವರ ಇವತ್ತಿನ ರಾವಣ ಮರುದಿನಕ್ಕೆ ಬೇರೆಯೇ ಚಿತ್ರಣ ಪಡೆಯುತ್ತಿತ್ತು.

O :-  ಎಂ. ಶಾಂತರಾಮ ಕುಡ್ವ, ಮೂಡಬಿದಿರೆ
         M.  Shantharama Kudva, Moodabidri

No comments:

Post a Comment